ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಶುಕ್ರವಾರ ಪಾರ್ಲಿಮೆಂಟ್ ಭವನದ ಪ್ರಧಾನ ಕಚೇರಿಯಲ್ಲಿ ಭೇಟಿಯಾಗಿ ಮೂರನೇ ಬಾರಿ ಪ್ರಧಾನಮಂತ್ರಿ ಆಯ್ಕೆಯಾಗಿರುವುದಕ್ಕೆ ಶುಭಕೋರಿದರು. ಶ್ರೀ ಕ್ಷೇತ್ರದ ಶ್ರೀ ಮಂಜುನಾಥ ಸ್ವಾಮಿಯ ಪ್ರಸಾದವನ್ನು ನೀಡಿ ದೇಶಕ್ಕೆ ಇನ್ನೂ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಆಶೀರ್ವದಿಸಿದರು.
ಬಳಿಕ ಶ್ರೀ ಮಂಜುನಾಥ ಸ್ವಾಮಿಯ ಪ್ರಸಾದವನ್ನು ನೀಡಿ ದೇಶಕ್ಕೆ ಇನ್ನೂ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಆಶೀರ್ವದಿಸಿದರು.ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ ಡಾ. ಹೆಗ್ಗಡೆ ಯವರು, ರಾಜ್ಯಸಭಾ ಸಂಸದರ ವ್ಯಾಪ್ತಿಗೆ ಬರುವ ನಿಧಿಯನ್ನು ಬೀದರ್‌ನಲ್ಲಿ ವಿನಿಯೋಗಿಸಿರುವ ಬಗೆಯನ್ನು ಪ್ರಧಾನಿಗೆ ವಿವರಿಸಿದರು.
ರಾಜ್ಯಾದ್ಯಂತ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ವಹಿಸಲ್ಪಡುವ 10 ಸಾವಿರ ಸಿ.ಎಸ್.ಸಿ. ಕೇಂದ್ರಗಳ ಮೂಲಕ ಕೇಂದ್ರ ಸರಕಾರದ ಹಾಗೂ ಸಿ.ಎಸ್.ಸಿ.ಯ ಪ್ರಮುಖ ಸೇವೆಗಳನ್ನು ಗ್ರಾಮೀಣ ಜನರ ಮನೆ ಬಾಗಿಲಿಗೆ ತಲುಪಿಸುತ್ತಿರುವ ಬಗ್ಗೆ ಪ್ರಧಾನಿಗೆ ವಿವರಿಸಲಾಯಿತು.
ಡಾ| ಹೆಗ್ಗಡೆಯವರು ಬೀದರ್‌ನಲ್ಲಿ ಕ್ಷೀರಕ್ರಾಂತಿಗೆ ಯೋಜಿಸಿದ್ದು, ಕೆ.ಎಂ.ಎಫ್. ಸಹಯೋಗದೊಂದಿಗೆ ಅನೇಕ ಹಾಲು ಒಕ್ಕೂಟಗಳನ್ನು ಅಭಿವೃದ್ಧಿಪಡಿಸಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಿದ್ದಾರೆ. ಹಾಲು ಸಂಗ್ರಹಕ್ಕೆ ಕಟ್ಟಡಗಳನ್ನು ನಿರ್ಮಿ ಸಿದ್ದಲ್ಲದೆ, ಅತ್ಯಾಧುನಿಕ ಯಂತ್ರಗಳನ್ನು ಒದಗಿಸಿದ್ದಾರೆ. ರೈತರಿಗೆ ಹೈನುಗಾರಿಕೆ ಬಗ್ಗೆ ತರಬೇತಿ ನೀಡಿದ್ದಾರೆ ಎಂದರು.
ಈ ಯೋಜನೆಗಿಂತ ಮೊದಲು ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಪ್ರತಿನಿತ್ಯ 18 ಸಾವಿರ ಲೀಟರ್ ಮಾತ್ರ ಇತ್ತು. ಪ್ರಸ್ತುತ 60 ಸಾವಿರ ಲೀಟರ್‌ಗೆ ಏರಿದೆ. ಇದನ್ನು 1 ಲಕ್ಷ ಲೀಟರ್‌ಗೆ ಏರಿಸುವ ಗುರಿ ಇದೆ ಎಂದು ಹೆಗ್ಗಡೆಯವರು ವಿವರಿಸಿದ್ದಕ್ಕೆ, ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.