ವಿಟ್ಲ: ರೈತರ ಬದುಕಿಗೆ ಕಂಟಕ ಪ್ರಾಯವಾಗಿರುವ ೪೦೦ಕೆವಿ ವಿದ್ಯುತ್ ಪ್ರಸರಣ ಮಾರ್ಗಕ್ಕೆ ಕಳೆದ ನಾಲ್ಕು ವರ್ಷಗಳಿಂದ ಕೃಷಿಕರಿಂದ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿವರೆಗೆ ಒಂದೇ ಒಂದು ಟವರ್ ನಿರ್ಮಾಣಕ್ಕೆ ಅವಕಾಶವನ್ನು ನೀಡಲಾಗಿಲ್ಲ. ಸ್ಟೆರ್ಲೈಟ್ ಕಂಪೆನಿಯವರಿಂದ ಕೇರಳದಲ್ಲಿ ಕೆಲಸ ಪೂರ್ತಿಯಾಗಿದೆ, ದ.ಕ.ಜಿಲ್ಲೆಯಲ್ಲಿ ೩೦ ಟವರ್ ಬೇಸ್ ಕಾಮಗಾರಿ ಆಗಿದೆ ಎಂದು ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ರೈತರು ಯಾರೊಬ್ಬರೂ ತಮ್ಮ ಜಾಗದೊಳಗೆ ಹೋಗಲು ಬಿಟ್ಟಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಹೇಳಿದರು.
ಜಿಲ್ಲೆಯ ಹಿರಿಯ ಹಿಂದೂ ಮುಖಂಡರೋರ್ವರು ಈ ಕಂಪೆನಿಗೆ ಹಿಂದಿನಿಂದ ಬೆಂಬಲ ನೀಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದು, ಅವರು ಹೇಳಿದಂತೆ ಇಲ್ಲಿನ ಶಾಸಕರು ಮತ್ತು ಪೊಲೀಸ್ ಇಲಾಖೆಗೆ, ಕಂದಾಯ ಇಲಾಖೆಯವರು ಕೆಲಸ ಮಾಡುತ್ತಿದ್ದಾರೆ. ಆ ಮುಖಂಡ ರೈತ ವಿರೋಧಿ ಕೆಲಸ ಮಾಡಿಕೊಂಡು ಮಣ್ಣು ತಿನ್ನುವ ಕೆಲಸ ಮಾಡಬಾರದು. ಹಿಂದೂ ಮುಖಂಡ ಕಂಪನಿ ನೀಡಿದ ಎಂಜಲು ಕಾಸಿಗೆ ಕೈ ಚಾಚಿದ ಮಾಹಿತಿ ಸಿಕ್ಕಿದ್ದು, ತತ್‌ಕ್ಷಣ ಅಕ್ರಮವಾಗಿ ಕಂಪೆನಿಯವರೊಡನೆ ವ್ಯವಹಾರ ಮಾಡುವುದನ್ನು ನಿಲ್ಲಿಸಬೇಕು. ಕಂಪನಿಯವರು ರೈತ ಮುಖಂಡರಿಗೆ ಹಾಗೂ ಸಂತ್ರಸ್ತ ರೈತರಿಗೆ ದೂರವಾಣಿ ಕರೆಯ ಮೂಲಕ ಆಮಿಷ ತೋರಿಸುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ವಿರೋಧಿಯಾದ ೧೮೮೫ ಹಾಗೂ ೧೯೧೦ರ ಕಾಯ್ದೆಗಳು ರೈತರ ಭೂಮಿಗೆ ಬರುವ ಸಂದರ್ಭ ಮಾನ್ಯವಾಗುವುದಿಲ್ಲ. ಕಂಪನಿಯವರು ಊರು ಬಿಟ್ಟು ತೆರಳದೆ ಮನೆ ಮನೆಗೆ ತೆರಳುವ ಕಾರ್ಯವನ್ನು ಮುಂದುವರಿಸಿದರೆ, ಕಛೇರಿಯನ್ನು ಧ್ವಂಸ ಮಾಡಲೂ ಸಿದ್ದರಿದ್ದೇವೆ ಎಂದು ವಿಟ್ಲದಲ್ಲಿ ಸುದ್ದಿಗೋಷ್ಠಿ ನಡೆಸಿ ಎಚ್ಚರಿಸಿದ್ದಾರೆ.
೪೦೦ ಕೆ.ವಿ. ಉಡುಪಿ ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಮಾತನಾಡಿ ವಿದ್ಯುತ್ ಪ್ರಸರಣ ಮಾರ್ಗ ಕೃಷಿಕರ ಭೂಮಿಯಲ್ಲಿ ಹೋಗುವುದಕ್ಕೆ ಯಾರದ್ದೂ ಒಪ್ಪಿಗೆಯಿಲ್ಲ. ಕಂಪೆನಿಯವರು ತಂಡ ಕಟ್ಟಿಕೊಂಡು ಬಂದು ಶೇ.೬೦ರಷ್ಟು ಕೆಲಸವಾಗಿದೆ ಎಂದು ಸುಳ್ಳು ಹೇಳಿ ಜನರನ್ನು ಮೋಸ ಮಾಡುವ ಕೆಲಸವಾಗುತ್ತಿದೆ. ಸರ್ಕಾರಗಳು ಉದ್ಯಮ ನಡೆಸುವವರಿಗೆ ಪರವಾನಿಗೆ ನೀಡುವ ರೀತಿಯಲ್ಲಿ ನೀಡಿದ ವ್ಯವಸ್ಥೆಯನ್ನೇ ಸರ್ಕಾರದ ಯೋಜನೆಯೆಂದು ಹೇಳಿಕೊಂಡು ಹೋಗುವ ಕೆಲಸ ಖಾಸಗೀ ಕಂಪನಿಯಿಂದ ನಡೆಯುತ್ತಿದೆ. ರೈತರಿಗೆ ಬೇಡವಾದ ಕೆಲಸಕ್ಕೆ ಸರ್ಕಾರ ಕೈಹಾಕುವುದಿಲ್ಲ ಎಂಬುದನ್ನು ರಾಜ್ಯ ಸರ್ಕಾರದ ಮಂತ್ರಿಗಳು ಭರವಸೆಯನ್ನು ನೀಡಿದ್ದಾರೆ. ರೈತರನ್ನು ಎದುರು ಹಾಕಿಕೊಳ್ಳುವುದು ತೀವ್ರ ತರದ ಪರಿಣಾಮಕ್ಕೆ ಕಾರಣವಾಗಬಹುದು. ಜಮೀನು ಹೋಗುವ ರೈತ ಪ್ರಾಣ ಬಿಡುವುದಕ್ಕೂ ಸಿದ್ದನಿದ್ದಾನೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕೋಶಾಧಿಕಾರಿ ಚಿತ್ತರಂಜನ್ ಎನ್. ಎಸ್. ಡಿ., ಸಂತ್ರಸ್ತ ರೈತರಾದ ಅಣ್ಣು ಗೌಡ, ಕೃಷ್ಣಪ್ರಸಾದ್ ವನಭೋಜನ, ಶ್ಯಾಮ್ ವನಭೋಜನ ಉಪಸ್ಥಿತರಿದ್ದರು.