ವಿಟ್ಲ: ವಿಟ್ಲ ಬಿಲ್ಲವ ಸಂಘ, ಮಹಿಳಾ ಬಿಲ್ಲವ ಘಟಕ, ವಿಟ್ಲ ಯುವವಾಹಿನಿ ಘಟಕದ ಸಂಯುಕ್ತ ಆಶ್ರಯದಲ್ಲಿ ‘ಆಟಿ ತಿಂಗೊಲ್ದ ಪೊಲಬು’ ಕಾರ್ಯಕ್ರಮ ವಿಟ್ಲ ಪೊನ್ನೊಟ್ಟು ಬ್ರಹ್ಮ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಬಂಟ್ವಾಳ ಸಂಚಯನ ಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಡಾ. ತುಕಾರಾಮ ಪೂಜಾರಿ, ನಮ್ಮ ಪೂರ್ವಜರ ಆಚರಣೆ , ಆಹಾರ ಪದ್ಧತಿಗಳಲ್ಲಿ ಜೀವ ಮತ್ತು ಜೀವನದ ಕಾಳಜಿ ತುಂಬಿತ್ತು. ಪ್ರಕೃತಿಯ ಋತುಮಾನಕ್ಕೆ ಅನುಗುಣವಾಗಿ ದೇಹಾರೋಗ್ಯವನ್ನು ರಕ್ಷಿಸಿಕೊಳ್ಳುವ ಚಾಕಚಕ್ಯತೆ ಅವರಲ್ಲಿತ್ತು. ಆಟಿ ತಿಂಗಳ ಆಚರಣೆಯಲ್ಲಿಯೂ ಆರ್ಥಿಕ ಅಸಹಾಯಕತೆಯ ನಡುವೆ ಆರೋಗ್ಯ, ಮನೋರಂಜನೆ ಯೊಂದಿಗೆ ಆನಂದವಾಗಿ ಬದುಕುತ್ತಿದ್ದರು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಪ್ಪಿನಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ದೇವಕಿ ಜೆ.ಜಿ ಮೌಲ್ಯ ಶಿಕ್ಷಣ ದೊರೆತಾಗ ಮಾತ್ರ ಮಕ್ಕಳು ಸರ್ವತೋಮುಖ ಬೆಳವಣಿಗೆಯೊಂದಿಗೆ ಸಮಾಜದ ಮಧ್ಯೆ ಮುನ್ನಡೆಯುತ್ತಾರೆ. ಕಾಲಘಟ್ಟದ ಬದಲಾವಣೆಯೊಂದಿಗೆ ಮೂಲ ಸಂಸ್ಕೃತಿ, ಆಚರಣೆಯ ಚಿತ್ರಣದ ಪರಿಚಯ ಇಂತಹ ಕಾರ್ಯಕ್ರಮಗಳ ಮೂಲಕ ನಡೆಯುತ್ತದೆ ಎಂದರು.
ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಉಷಾ ಅಂಚನ್ ಮಾತನಾಡಿ ಬಿಲ್ಲವ ಸಮಾಜದ ಪ್ರತಿಯೊಬ್ಬರೂ ಸುಶಿಕ್ಷಿತ ರಾಗಿ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿ ಮುನ್ನಡೆಯಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಿಟ್ಲ ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಸಂಜೀವ ಪೂಜಾರಿ ವಹಿಸಿದ್ದರು.
ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಮಾಧವ ಪೂಜಾರಿ ಪಟ್ಲ, ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ, ವಿಟ್ಲ ಯುವವಾಹಿನಿ ಘಟಕದ ಅಧ್ಯಕ್ಷ ರಾಜೇಶ್ ವಿಟ್ಲ, ವಿಟ್ಲ ಬ್ರಹ್ಮ ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ, ವಿಟ್ಲ ಬಿಲ್ಲವ ಮಹಿಳಾ ಘಟಕದ ಗೌರವಾಧ್ಯಕ್ಷೆ ಪ್ರೇಮಲತಾ ಸೋಮಶೇಖರ್ ಉಕ್ಕುಡ, ಯುವವಾಹಿನಿ ಘಟಕದ ಕಾರ್ಯದರ್ಶಿ ಶೋಭಾ ವಿಶ್ವನಾಥ್ ಉಪಸ್ಥಿತರಿದ್ದರು.
ತುಳು ಪಾಡ್ದನ, ಆಟಿ ತಿನಿಸುಗಳ ಪ್ರದರ್ಶನ ನಡೆಯಿತು.ಕವಿತಾ ಪರಮೇಶ್ವರ್ ಸ್ವಾಗತಿಸಿದರು.
ವಿಟ್ಲ ಬಿಲ್ಲವ ಮಹಿಳಾ ಘಟಕದ ಕಾರ್ಯದರ್ಶಿ ಭಾರತಿ ಪ್ರಕಾಶ್ ವಂದಿಸಿದರು. ಶಿಕ್ಷಕಿ ಧನಲಕ್ಷ್ಮಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.