ಬಂಟ್ವಾಳ: ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಜ್ವರ ಬಾಧಿತ ಪ್ರಕರಣಗಳು ಕಂಡು ಬರುತ್ತಿದ್ದು, ಶಂಕಿತ ಡೆಂಗ್ಯೂ ಜ್ವರ ಎಂಬ ವದಂತಿಗಳು ಹರಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.
ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕೊಡಂಬೆಟ್ಟು ಗ್ರಾಮದ ಬಾಂಬಿಲ ಸಮೀಪದ ಗಟ್ಲೆಕೋಡಿ,ಮೂಂಡಾಬೈಲು ಎಂಬಲ್ಲಿ ನ ಗ್ರಾಮಸ್ಥರು ಜ್ವರದಿಂದ ನರಳುತ್ತಿದ್ದು, ಜ್ವರ ಬಾಧಿತರು ಔಷಧಿಗೆ ಹೋಗಿರುವ ಆಸ್ಪತ್ರೆಯಲ್ಲಿ ಶಂಕಿತ ಡೆಂಗ್ಯೂ ಎಂದು ಹೇಳಲಾಗಿದೆಯಂತೆ! ಇದರಿಂದ ಇಡೀ ಗ್ರಾಮದ ಜನತೆ ಹೆದರಿದ್ದಾರೆ.
ಬೊಂಡ ರಾಶಿಯಿಂದ ಸೊಳ್ಳೆಗಳು ಉತ್ಪಾದನೆ: ತುಂಗಪ್ಪ ಬಂಗೇರ ಆರೋಪ
ಗಟ್ಲಕೋಡಿ ಎಂಬಲ್ಲಿ ರಾಶಿ ಹಾಕಲಾದ ಬೊಂಡ ರಾಶಿಯಿಂದಲೇ ಡೆಂಗ್ಯೂ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆಗಳಿದ್ದು, ಕೂಡಲೇ ಅಲ್ಲಿಂದ ತೆರವು ಮಾಡುವಂತೆ ಗ್ರಾಮಸ್ಥರು ಸ್ಥಳೀಯ ಗ್ರಾಪಂ.ಗೆ ಮನವಿ ಮಾಡಿದ್ದಾರೆ.
ಪಾಣೆಮಂಗಳೂರನಲ್ಲಿರುವ ಹೆಸರಾಂತ ಐಸ್ ಕ್ರೀಮ್ ಒಂದರ ಖಾಸಗಿ ಜಾಗದಲ್ಲಿ ಅವರು ಐಸ್ ಕ್ರೀಮ್ ಮಾಡಲು ಉಪಯೋಗಿಸಿದ ಬೊಂಡಾವನ್ನು ಬಳಿಕ ಒಣಗಲು ಇಲ್ಲಿ ರಾಶಿ ಹಾಕಿದ್ದಾರೆ, ಇದರಲ್ಲಿ ಕಳೆದ ವಾರ ಬಂದಿರುವ ಮಳೆ ನೀರು ನಿಂತಿದ್ದು,ಸೊಳ್ಳೆಗಳು ಉತ್ಪಾದನೆಯಾಗಿರಬಹುದು ಎಂಬ ಮಾತನ್ನು ಹೇಳುತ್ತಿದ್ದಾರೆ.
ಈಗಾಗಲೇ ಸಂಬಂಧಿಸಿದ ಇಲಾಖೆಯ ಸಿಬ್ಬಂದಿಗಳು ಸರ್ವೇ ಕಾರ್ಯವನ್ನು ಮಾಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದು, ಅವರ ಗಮನಕ್ಕೆ ಬಂದಿರುವ ವಿಚಾರಗಳನ್ನು ಗ್ರಾ.ಪಂ.ಗೆ ಹಾಗೂ ಇಲಾಖೆಗೆ ತಿಳಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮಾಣಿ- ಪೆರಾಜೆಯಲ್ಲಿದೆ ಜ್ವರ…
ತಾಲೂಕಿನ ಮಾಣಿ ಸಮೀಪದ ಪೆರಾಜೆ ಎಂಬಲ್ಲಿ ಕೂಡ ಜ್ವರದ ಪ್ರಕರಣಗಳು ಕಂಡು ಬಂದಿದ್ದು, ಅನೇಕ ಮಂದಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲಾಗಿದೆ . ಖಾಸಗಿ ಆಸ್ಪತ್ರೆಯಲ್ಲಿ ಶಂಕಿತ ಡೆಂಗ್ಯೂ ಎಂದು ಚಿಕಿತ್ಸೆ ನೀಡಿದ್ದಾರೆ.
ಆದರೆ ಪೆರಾಜೆಯ ಸುಮಾರು ಮನೆಗಳಲ್ಲಿ ಪ್ರಕರಣಗಳು ಕಂಡು ಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಸರಪಾಡಿಯಲ್ಲಿಯೂ ಪ್ರಕರಣಗಳು ಕಂಡು ಬಂದಿದ್ದು, ಜ್ವರದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಡೆಂಗ್ಯೂ ಪ್ರಕರಣಗಳು ಬರುವ ಸಾಧ್ಯತೆ ಬಹುತೇಕ ಕಡಿಮೆ…
ತಾಲೂಕಿನ ಬಹುತೇಕ ಎಲ್ಲಾ ಪ್ರಕರಣಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಪರಿಣಾಮ ತಾಲೂಕುಆಸ್ಪತ್ರೆಗೆ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಅಲ್ಲದೆ ಸುಡು ಬೇಸಿಗೆಯಲ್ಲಿ ಡೆಂಗ್ಯೂ ಸೊಳ್ಳೆಗಳು ಉತ್ಪತ್ತಿಯಾಗುವ ಅವಕಾಶಗಳು ಕೂಡ ಬಹುತೇಕ ಕಡಿಮೆಯೇ. ಬಿಟ್ಟು ಬಿಟ್ಟು ಮಳೆ ಬಂದು ಹೋದರೆ ಅವಕಾಶಗಳು ಜಾಸ್ತಿಯಿತ್ತು. ಡೆಂಗ್ಯೂ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಪರೀಕ್ಷೆಗಳು ಇವೆ….ಅದರಲ್ಲಿ ಪಾಸಿಟಿವ್ ಬಂದರೆ ಮಾತ್ರ ಡೆಂಗ್ಯೂ ಎಂದು ಖಚಿತಪಡಿಸಬಹುದು. ಹೊರತು ಪಡಿಸಿ ಯಾವುದೇ ಸ್ಪಷ್ಟವಾದ ಮಾಹಿತಿ ನೀಡಲು ಅಸಾಧ್ಯ ಎಂದು ತಿಳಿಸಿದ್ದಾರೆ.