ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಮಂಗಳವಾರ ಶ್ರೀ ಹನುಮೋತ್ಸವದ ಅಂಗವಾಗಿ ಭಗವನ್ನಾಮಸಂಕೀರ್ತನೆ ಮಂಗಲ, ಶ್ರೀಮದ್ರಾಮಾಯಣ ಮಹಾಯಜ್ಞದ ಸಂದರ್ಭದಲ್ಲಿ ದತ್ತಪ್ರಕಾಶ ಪತ್ರಿಕೆಯ 25ನೇ ವರ್ಷದ ಪ್ರಥಮ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಶ್ರೀ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ದೇಶ ಬಲಿಷ್ಠವಾಗಲು ರಾಷ್ಟ್ರ ಪ್ರೇಮದ ಜತೆಗೆ ರಾಮನ ಆದರ್ಶ ಅಗತ್ಯವಿದ್ದು, ಈ ಮೂಲಕ ಧರ್ಮಾನುಷ್ಠಾನದ ಕಾರ್ಯ ಸುಲಭವಾಗುತ್ತದೆ. ಸಂಸಾರದ ಒಳಗೆ ಅರಿವಿನ ಅಗತ್ಯವಿದ್ದು, ಆ ಮೂಲಕ ಬದುಕನ್ನು ಉತ್ತಮವಾಗಿಸಬಹುದು. ಸಮಾಜಮುಖಿಯಾಗಿ ಬದುಕುವವನಿಗೆ ಆತ್ಮಾನಂದ ಪಡೆಯಲು ಅರ್ಹನಾಗಿರುತ್ತಾನೆ. ಸೇವಾ ಮನೋಭಾವದಿಂದ ಸಹಕಾರ ತತ್ವದಲ್ಲಿ ಮುನ್ನಡೆದಾಗ ಯಶಸ್ವಿ ನಿಶ್ಚಿತ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು
ಆಧ್ಯಾತ್ಮದಲ್ಲಿ ಆನಂದದ ಸೆಲೆಯಿದ್ದು, ಭಜನೆಯ ಮೂಲಕ ಆತ್ಮಾನಂದವನ್ನು ಪಡೆಯಬಹುದು. ಧರ್ಮಾನುಷ್ಠಾನದ ನಡೆಯಲ್ಲಿ ಸಾಗಿದಾಗ ಆತ್ಮೋನ್ನತಿ ಪಡೆಯಬಹುದಾಗಿದ್ದು, ಪ್ರತಿಯೊಬ್ಬರೂ ಆನಂದವನ್ನು ತನ್ನೊಳಗೆ ಹುಡುಕಬೇಕು. ಪತ್ರಿಕೆಯನ್ನು ಓದುವುದರಿಂದ ಜ್ಞಾನ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ. ಸರಿಯಾದ ಅರಿವಿನಿಂದ, ಜೋಪಾನವಾಗಿ ಮತದಾನ ಮಾಡಬೇಕಾಗಿದೆ. ಬಲಿಷ್ಠ ನಾಯಕ ರಾಷ್ಟ್ರಕ್ಕೆ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಆಯ್ಕೆ ನಡೆಯಬೇಕಾಗಿದೆ ಎಂದು ತಿಳಿಸಿದರು.
ಭಗವನ್ನಾಮಸಂಕೀರ್ತನೆ ಮಂಗಲ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಶ್ರೀಮದ್ರಾಮಾಯಣ ಮಹಾಯಜ್ಞ, ನಾಗದೇವರಿಗೆ ಪಂಚಾಮೃತ ಅಭಿಷೇಕ, ನಾಗ ತಂಬಿಲ, ಮಹಾಯಜ್ಞದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ರಂಗೋಲಿ ಬಿಡಿಸಿದ ಶಿವ ಪ್ರಸಾದ್ ಹೊಳ್ಳ ಸೇರಿ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಗೌರವಿಸಲಾಯಿತು.
ಮುಂಬೈ ಉದ್ಯಮಿಗಳಾದ ವಾಮಯ್ಯ ಬಿ.ಶೆಟ್ಟಿ, ರಮೇಶ್ ಶೆಟ್ಟಿ ಸಿ.ಬಿ.ಡಿ., ಒಡಿಯೂರು ಶ್ರೀ ಗುರುದೇವ ಸೆವಾ ಬಳಗ, ಮುಂಬೈ ಘಟಕದ ಅಧ್ಯಕ್ಷ ದಾಮೋದರ ಎಸ್.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೆ. ಶೆಟ್ಟಿ ಪೇಟೆಮನೆ, ಒಡಿಯೂರು ಶ್ರೀ ಯುವ ಸೇವಾ ಬಳಗ, ಮುಂಬೈ ಘಟಕಾಧ್ಯಕ್ಷ ಡಾ. ಅದಿಪ್ ಕೆ. ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಹಕಾರಿ ರತ್ನ ಎ. ಸುರೇಶ್ ರೈ ಮತ್ತಿತರರು ಉಪಸ್ಥಿತರಿದ್ದರು.
ಸಂತೋಷ್ ಭಂಡಾರಿ ವಂದಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.