ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕೆಲ ಮತಗಟ್ಟೆಗಳಲ್ಲಿ ಮಂದಗತಿಯ ಮತದಾನ ನಡೆಯುತ್ತಿದ್ದು, ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂದಾವರ ಹೈಸ್ಕೂಲ್ ಮತ್ತು ಗೋಳ್ತಮಜಲು ಗ್ರಾ.ಪಂ.ನಲ್ಲಿ ಹಾಗೂ ಸಜೀಪ ಮೂಡ ಗ್ರಾಮದ ಸುಭಾಷ್ ನಗರ ಹಿ.ಪ್ರಾ.ಶಾಲೆಯಲ್ಲಿ ಮತದಾನ ಬಹಳ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ಹೇಳಲಾಗಿದೆ. ಮತಗಟ್ಟೆಯ ಹೊರಗಡೆ ಮತದಾನ ಮಾಡಲು ಬಂದಿರುವ ಮತದಾರರು ಕಾದು ಕಾದು ಸುಸ್ತಾಗಿದ್ದಾರೆ. ಸುಡುವ ಬಿಸಿಲು ಹಾಗೂ ಸೆಕೆ ನಡುವೆ ಮತದಾರರನ್ನು ಕಾಯಿಸಲಾಗುವುದು ಸರಿಯಲ್ಲ ಎಂದು ಆರೋಪ ಮಾಡಲಾಗಿದೆ.
ಮತಗಟ್ಟೆಯೊಳಗಿನ ಅಧಿಕಾರಿಗಳು ಬಹಳ ನಿಧಾನವಾಗಿ ಕಾರ್ಯನಿರ್ವಹಿಸುವುದೇ ಇದಕ್ಕೆ ಕಾರಣ ಎಂಬ ಆರೋಪ ವ್ಯಕ್ತವಾಗಿವೆ.