ಮಂಗಳೂರು: ಬಾವಿಗೆ ಬಿದ್ದ ಅಪರೂಪದ ಕರಿ ಚಿರತೆಯನ್ನು ಸ್ಥಳೀಯರ ನೆರವಿನಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ರಕ್ಷಣೆ ಮಾಡಿದ ಘಟನೆ ಮಂಗಳೂರಿನ ಎಡಪದವು ಸನಿಲ ಎಂಬಲ್ಲಿ ನಡೆದಿದೆ.
ಎಡಪದವು ಸನಿಲ ನಿವಾಸಿ ಶಕುಂತಲಾ ಎಂಬವರ ಮನೆಯ ಬಾವಿಗೆ ಶನಿವಾರ ರಾತ್ರಿ ಕರಿ ಚಿರತೆಯೊಂದು ಬಿದ್ದಿತ್ತು. ಈ ವೇಳೆ ಬಾವಿಗೆ ನೀರು ತರಲು ಹೋದಾಗ ಕರಿ ಚಿರತೆ ಇರುವುದು ಬೆಳಕಿಗೆ ಬಂದಿದ್ದು, ತಕ್ಷಣ ಸ್ಥಳೀಯರಿಗೆ ಹಾಗೂ ಅರಣ್ಯ ಇಲಾಖೆಗೆ ಮನೆಯವರು ಮಾಹಿತಿ ನೀಡಿದ್ದಾರೆ.
ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯವರು, ಸ್ಥಳೀಯರ ಸಹಕಾರದೊಂದಿಗೆ 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೋನಿನ ಮೂಲಕ ಕರಿ ಚಿರತೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.