ಮಂಗಳೂರು: ‘ಮೋದಿ ಮೋದಿ’ ಎಂದು ಘೋಷಣೆ ಕೂಗುವ ಯುವಕರ ಕಪಾಳಕ್ಕೆ ಹೊಡೆಯಬೇಕು ಎಂಬ ಸಚಿವ ಶಿವರಾಜ್ ತಂಗಡಗಿ ಹೇಳಿಕೆಗೆ ಬೆಳ್ತಂಗಡಿ ಶಾಸಕ, ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಂಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ಹತಾಶೆಯ ಭಾವನೆ ರಾಜ್ಯದಲ್ಲಿ ವ್ಯಕ್ತವಾಗಿದೆ. ಶಿವರಾಜ ತಂಗಡಗಿ ಹೇಳಿಕೆಯೇ ಇದಕ್ಕೆ ಉದಾಹರಣೆ. 2024 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನು ಒಪ್ಪಿಕೊಂಡಿದೆ. ಇದು ತಂಗಡಗಿ ಅವರ ಬಾಯಲ್ಲಿ ಬಂದಿದೆ ಎಂದು ಹೇಳಿದರು.
ಕಾಂಗ್ರೆಸ್ ಮೇಲಿನಿಂದ ಕೆಳಗಿನವರೆಗೂ ಒಂದೇ ಮಾನಸಿಕತೆ ಇರುವ ಪಕ್ಷ. ಒಬ್ಬ ಒಳ್ಳೆಯ ಮನುಷ್ಯನನ್ನು ಹೆಕ್ಕಿ ತೆಗೆಯಲು ಸಾಧ್ಯ ಇಲ್ಲದಂತ ಪಕ್ಷ. ಯಾರು ಯಾವ ಮಾತನ್ನು ಹೇಳಿದರೂ ಡಿಕೆ ಶಿವಕುಮಾರ್ ಆದಿಯಾಗಿ ರಾಹುಲ್ ಗಾಂಧಿವರೆಗೂ ಅದನ್ನು ಸಮರ್ಥನೆ ಮಾಡುತ್ತಾರೆ. ಆದರೆ, ಬಿಜೆಪಿಯ ಯಾವನೇ ನಾಯಕ ತಪ್ಪು ಹೇಳಿಕೆ ಕೊಟ್ಟರೆ ಅದು ವೈಯಕ್ತಿಕ ಹೇಳಿಕೆ ಎಂದು ಹೇಳುತ್ತದೆ. ಪಕ್ಷಕ್ಕೂ ಅದಕ್ಕೂ ಸಂಬಂಧ ಇಲ್ಲ ಎಂದು ಹೇಳಿ ತಿದ್ದಿಕೊಳ್ಳುತ್ತದೆ. ಮನೆ ಮಕ್ಕಳ ಚಾಲಿ ಊರಿಗೆಲ್ಲಾ ಎಂಬಂತೆ ಕಾಂಗ್ರೆಸ್ನ ಎಲ್ಲಾ ನಾಯಕರಿಗೂ ಇದು ಅನ್ವಯವಾಗುತ್ತದೆ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ದ್ವೇಷ, ಅಸಹಿಷ್ಣುತೆಯ ಮಾತುಗಳನ್ನಾಡಿರುವುದು ಇದೇ ಮೊದಲೇನಲ್ಲ. ಬಿಜೆಪಿ ಮತ್ತು ಮೋದಿಯನ್ನು ಎದುರಿಸಲಾಗದೆ ಅನೇಕ ನಾಯಕರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಈ ದೇಶದ ಇತಿಹಾಸವನ್ನು ತಂಗಡಗಿ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ನ ದುರಾಡಳಿತ ಮುಚ್ಚಿ ಹಾಕಲು ಈ ರೀತಿ ಹೇಳಿದ್ದಾರೆ ಎಂದು ಹೇಳಿದರು.