ಪುತ್ತೂರು: ಮಾರುಕಟ್ಟೆಯಲ್ಲಿ ಹಸಿ ಕೊಕ್ಕೋ ಧಾರಣೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಪ್ರಸ್ತುತ ಪ್ರತೀ ಕೆ.ಜಿ.ಗೆ 200 ರೂ. ದಾಟಿದೆ.
ಇದರ ಜತೆಗೆ ಒಣ ಕೊಕ್ಕೊ ಧಾರಣೆಯೂ ಜಿಗಿದಿದ್ದು, ಬೆಳೆಗಾರರಲ್ಲಿ ಉಲ್ಲಾಸ ಮೂಡಿಸಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಮಾ. 25ರಂದು ಹಸಿ ಕೊಕ್ಕೊ ಕೆ.ಜಿ.ಗೆ 205ಕ್ಕೆ ಖರೀದಿಯಾಗಿದೆ. ಪಂಜ ಮಾರುಕಟ್ಟೆಯಲ್ಲಿ 210 ರೂ.ಗೆ ಖರೀದಿಯಾಗಿದೆ. ಒಣ ಕೊಕ್ಕೊಗೆ ಎರಡು ದಿನಗಳ ಹಿಂದೆ ಇದ್ದ ಧಾರಣೆಯನ್ನು ಗಮನಿಸಿದರೆ ಕೆ.ಜಿ.ಯೊಂದಕ್ಕೆ 75 ರೂ.ಗಳಷ್ಟು ಏರಿಕೆ ಕಂಡಿದೆ. ಅಲ್ಲದೆ ಇನ್ನಷ್ಟು ಹೆಚ್ಚಳವಾಗುವ ಮುನ್ಸೂಚನೆಯನ್ನೂ ಮಾರುಕಟ್ಟೆ ನೀಡಿದೆ.
ಒಣ ಕೊಕ್ಕೊ ಧಾರಣೆಯಲ್ಲೂ ಏರಿಕೆ
ಹಸಿ ಕೊಕ್ಕೊ ಮಾತ್ರವಲ್ಲದೆ ಒಣ ಕೊಕ್ಕೊ ಧಾರಣೆಯಲ್ಲಿಯೂ ಹೆಚ್ಚಳ ಆಗಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಮಾ. 23ರಂದು ಒಣ ಕೊಕ್ಕೊಗೆ ಕೆ.ಜಿ. ಗೆ 500-575 ರೂ. ಇತ್ತು. ಮಾ. 25ರಂದು 575-650 ರೂ. ಆಗಿದೆ. ಅಂದರೆ ಕೆ.ಜಿ.ಗೆ 75 ರೂ.ನಷ್ಟು ಏರಿಕೆ ಕಂಡಿದೆ.
ಹೊಸ ಅಡಿಕೆ ಧಾರಣೆ ಹೆಚ್ಚಳ
ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ ಯಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 5 ರೂ. ಏರಿದೆ. ಸಿಂಗಲ್‌ಚೋಲ್, ಡಬ್ಬಲ್ ಚೋಲ್ ಧಾರಣೆ ಸ್ಥಿರವಾಗಿದೆ. ಮಾ. 25ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 345-365 ರೂ. ದಾಖಲಾಗಿದೆ. ಹೊರ ಮಾರು ಕಟ್ಟೆ ಯಲ್ಲಿ 370 ರೂ. ತನಕವೂ ಇತ್ತು. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್ ಕೆ.ಜಿ.ಗೆ 420-435 ರೂ., ಡಬ್ಬಲ್ ಚೋಲ್ ಕೆ.ಜಿ.ಗೆ 435-445 ರೂ. ಇದ್ದು, ಧಾರಣೆ ಸ್ಥಿರವಾಗಿತ್ತು.