Saturday, April 13, 2024

ಕುಡಿಯುವ ನೀರು – ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆ

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಒದಗಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಟಾಸ್ಕ್ ಫೋರ್ಸ್ ಸಮಿತಿ ಸಭೆ ಸೋಮವಾರ ಬೆಳಗ್ಗೆ ತಾಲೂಕು ಆಡಳಿತ ಸೌಧದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು.

ತಹಸೀಲ್ದಾರ್ ಡಿ.ಅರ್ಚನಾ ಭಟ್ ಸಹಿತ ತಾಲೂಕಿನ ಉನ್ನತ ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಇಲಾಖಾವಾರು ಸಿದ್ಧತೆಗಳ ಕುರಿತು ಚರ್ಚಿಸಲಾಯಿತು.

ಕ್ಷೇತ್ರದಲ್ಲಿ ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿಗೆ ಈ ಸಾಲಿನ ಬೇಸಗೆಯಲ್ಲಿ ಕೊರತೆ ಉಂಟಾಗುವ ಸಂಭವ ಇಲ್ಲ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಕನ್ಯಾನ ಸಹಿತ ಎರಡು ಕಡೆಗಳಲ್ಲಿ ತಾಲೂಕಿನಲ್ಲಿ ಗೋಶಾಲೆ ಇದೆ ಎಂಬ ಮಾಹಿತಿ ನೀಡಿದ ಅವರು, ಈಗಾಗಲೇ ಮಿನಿ ಕಿಟ್ ಗಳನ್ನು ವಿತರಿಸಲಾಗಿದೆ. ಹಿಂಗಾರು ಮಳೆ ಉತ್ತಮವಾಗಿ ಆಗಿರುವ ಕಾರಣ ಹುಲ್ಲುಗಳು ಬೆಳೆದಿದ್ದು, ಸಮಸ್ಯೆಗಳು ಇಲ್ಲ, ಹಿನ್ನೀರಿನ ಪ್ರದೇಶಗಳಲ್ಲಿ ಹುಲ್ಲು ಬೆಳೆಸುವ ಕಾರ್ಯವೂ ಪ್ರಗತಿಯಲ್ಲಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ಈ ಕುರಿತು ಮಾಹಿತಿ ನೀಡಿ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಕುರಿತು ಲಸಿಕೆಗಳು ಇಲಾಖೆಯಲ್ಲಿ ಲಭ್ಯವಿದೆ ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪರವಾಗಿ ಕಿರಿಯ ಇಂಜಿನಿಯರ್ ಮಾಹಿತಿ ನೀಡಿ, ಪುಚ್ಚೆಮೊಗರು ನೀರಿನ ಡ್ಯಾಂನಲ್ಲಿ ಕಳೆದ ಬಾರಿ ಪುಚ್ಚೆಮೊಗರು ನೀರಿನ ಡ್ಯಾಂನಲ್ಲಿ ಅವಧಿಗೆ ಮುನ್ನ ನೀರು ಹಾಯಿಸಿ ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆಯಾಗಿರುವ ಕುರಿತು ವಿವರಣೆಯನ್ನು ಶಾಸಕರು ಕೇಳಿದ್ದಕ್ಕೆ ಉತ್ತರಿಸಿ, ಈ ಬಾರಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಬೇಸಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವ ಯಾವುದೇ ಸಾಧ್ಯತೆ ಇರುವುದಿಲ್ಲ ಎಂದು ಹೇಳಿದರು.

ಸದಸ್ಯ ಕಾರ್ಯದರ್ಶಿಯಾದ ತಹಸೀಲ್ದಾರ್ ಮಾತನಾಡಿ, ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆಯಾಗುವ ನೀರು ಸರಬರಾಜು ಮಾಡುವಾಗ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ನೀರಿನ ಗುಣಮಟ್ಟ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವದಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂಥ ಯಾವುದಾದರೂ ಪ್ರದೇಶಗಳು ಇರುವುದೇ ಎಂಬ ಕುರಿತು ಮಾಹಿತಿಯನ್ನು ಶಾಸಕರು ಕೇಳಿದರು.

ಈ ಸಂದರ್ಭ ಇಲಾಖಾ ಮುಖ್ಯಸ್ಥರಾದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರವಾಗಿ ಕಚೇರಿ ಸಹಾಯಕರು ಮಾಹಿತಿ ನೀಡಿ ಅಂಥ ಪರಿಸ್ಥಿತಿ ಇಲ್ಲವೆಂದರು.

ತಹಸೀಲ್ದಾರ್ ಈ ಸಂದರ್ಭ ಮಾತನಾಡಿ, ಗ್ರಾಮಮಟ್ಟದಲ್ಲಿ ಮನೆಮನೆ ಪೈಪ್ ಲೈನ್ ಮೂಲಕ ಪಂಚಾಯಿತಿಯಿಂದ ಕುಡಿಯುವ ನೀರಿನ ಸರಬರಾಜು ಆಗುತ್ತಿದ್ದು, ಯಾವುದೇ ಪೋಲಾಗದಂತೆ ಎಚ್ಚರಿಕೆ ವಹಿಸುವುದು ಹಾಗೂ ಪೈಪ್ ಲೈನ್ ಗಳನ್ನು ಸುಸ್ಥಿತಿಯಲ್ಲಿ ಇಡುವುದು ಅಗತ್ಯ ಎಂದು ಮನವರಿಕೆ ಮಾಡಿದರು.

ಕಾಡ್ಗಿಚ್ಚು, ಅಗ್ನಿ ಅವಘಡಗಳಲ್ಲಿ ಪ್ರಾಣಹಾನಿ ಆದಲ್ಲಿ ಹಾಗೂ ದುರ್ಘಟನೆ ಕಂಡುಬಂದಲ್ಲಿ ಮೆಸ್ಕಾಂ ವತಿಯಿಂದ ಅಳವಡಿಸಲಾದ ಟ್ರಾನ್ಸ್ ಫಾರ್ಮರ್ ಅಡಿಯಲ್ಲಿ ಇರುವ ಹುಲ್ಲು ಸ್ವಚ್ಛಮಾಡದೆ ಇರುವುದರಿಂದ ಅಗ್ನಿ ಅವಘಡ ಹೆಚ್ಚಾಗುತ್ತಿದೆ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿ, ಕ್ರಮ ಕೈಗೊಳ್ಳುವಂತೆ ಕೋರಿದರು. ಈ ಕುರಿತು ಸೂಚನೆ ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಫ್ರೂಟ್ಸ್ ತಂತ್ರಾಂಶದಲ್ಲಿ ಪ್ರಗತಿ ಸಾಧಿಸಲು ತೋಟಗಾರಿಕೆ ಮತ್ತು ಕೃಷಿ ಇಲಾಖೆಯವರು ಪೂರ್ಣ ಸಹಕಾರ ನೀಡುವಂತೆ ತಹಸೀಲ್ದಾರ್ ತಿಳಿಸಿದರು. ಕೃಷಿಕರಿಗೆ ಸೂಕ್ತ ಮಾಹಿತಿ ನೀಡುವಂತೆ, ಜಾಗೃತಿ ಮೂಡಿಸುವಂತೆ ಗಮನ ಸೆಳೆಯಲಾಯಿತು.

More from the blog

ಯುವಮೋರ್ಚಾ ಬಂಟ್ವಾಳ ವತಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಬಿ. ಸಿ ರೋಡಿನ ರಕ್ತೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ

ಯುವಮೋರ್ಚಾ ಬಂಟ್ವಾಳ ವತಿಯಿಂದ ನರೇಂದ್ರ ಮೋದಿ ಮತೊಮ್ಮೆ ಪ್ರಧಾನಿಯಾಗಲೆಂದು ರಕ್ತೇಶ್ವರಿ ದೇವಸ್ಥಾನ ಬಿ. ಸಿ ರೋಡಿನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಸ್ವಿಮ್ಮಿಂಗ್​ ಪೂಲ್​ ನೀರಿಗೆ ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವು

ಉಡುಪಿ‌: ಸ್ವಿಮ್ಮಿಂಗ್​ ಫೂಲ್​ನಲ್ಲಿ ಮುಳುಗಿ 4ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್​​ನಲ್ಲಿ ನಡೆದಿದೆ. ಉಡುಪಿ‌ಯ ಹೊಡೆ ಮೂಲದ ಮುಹಮ್ಮದ್ ಅರೀಝ್ ಮೃತ ವಿದ್ಯಾರ್ಥಿ. ದಾರುಸ್ಸಲಾಮ್...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೆ..ಮಹಾರಥೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಎ. ೧೧ರಂದು ಸಂಜೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ...

ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ"ದ ಅಂಗವಾಗಿ ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ...