Thursday, April 11, 2024

ವಿಶ್ವ ಮಾನಸಿಕ ಆರೋಗ್ಯ ದಿನ ಅಕ್ಟೋಬರ್ 10

ಪ್ರತಿ ವರ್ಷ ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನ ಎಂದು ವಿಶ್ವಾದಾದ್ಯಂತ ಆಚರಿಸಿ ಜನರಲ್ಲಿ “ಮಾನಸಿಕ ಆರೋಗ್ಯದ ಅನಿವಾರ್ಯತೆ” ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ವಿಶ್ವ ಮಾನಸಿಕ ಸಂಸ್ಥೆ ಮಾಡುತ್ತದೆ. 2018 ರಲ್ಲಿ “ಯುವ ಜನರು ಮತ್ತು ಬದಲಾಗುತ್ತಿರುವ ಜಗತ್ತಿನಲ್ಲಿ ಮಾನಸಿಕ ಆರೋಗ್ಯ” ಎಂಬ ತಿರುಳನ್ನು ಇಟ್ಟುಕೊಂಡು ಆಚರಣೆ ಮಾಡಲಾಗಿದೆ. 2019ರಲ್ಲಿ “ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆಯುವಿಕೆ’’ ಎಂಬ ದ್ಯೇಯ ವಾಕ್ಯದೊಂದಿಗೆ ಆಚರಣೆ ಮಾಡಲಾಗಿದೆ. ಈ ಆಚರಣೆಯನ್ನು ಮೊದಲ ಬಾರಿಗೆ 1992 ಅಕ್ಟೋಬರ್ 10ರಂದು ಆರಂಭಿಸಲಾಗಿತ್ತು. ಇತ್ತಿಚ್ಚನ ದಿನಗಳಲ್ಲಿ ಬದಲಾಗುತ್ತಿರುವ ಜೀವನ ಶೈಲಿ ಕೆಲಸದ ವಾತಾವರಣ ವಿಪರೀತ ಸ್ಪದ್ರ್ಮಾತ್ಮಕವಾದ ಜಗತ್ತು ಮತ್ತು ವೇಗದ ಧಾವಂತದ ಬದುಕಿನಿಂದಾಗಿ, ಯುವ ಜನರು ಬಹಳ ಬೇಗ ಉದ್ವೇಗಕ್ಕೆ, ಕಿನ್ನತೆಗೆ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಉಸಿರುಗಟ್ಟಿಸುವ ಪೈಪೋಟಿ ಸದಾ ಕಾಲೆಳೆಯುವ ಪ್ರವೃತ್ತಿಯ ಜನರ ಧೋರಣೆ ಮತ್ತು ನಿಗದಿತ ಫಲಿತಾಂಶ ನೀಡಬೇಕಾದ ಒತ್ತಡಕ್ಕೆ ಹೊಂದಿಕೊಳ್ಳಲು ಸಾದ್ಯವಾಗದೆ ಯುವ ಜನರು ದಾರಿ ತಪ್ಪುವ ಸಾಧ್ಯತೆ ಹೆಚ್ಚಾಗುತ್ತಿದೆ. ಧೂಮಪಾನ, ಮಧ್ಯಪಾನ ಮಾರಕ ವಸ್ತು ಸೇವನೆ ಮುಂತಾದವುಗಳಿಗೆ ದಾಸರಾಗಿ ಅದೇ ವಿಷವರ್ತುಲದಲ್ಲಿ ಸಿಕ್ಕಿಕೊಂಡು ಹೊರಬರಲಾರದೆ ಶಾಶ್ವತವಾಗಿ ಮನೋ ರೋಗಿಗಳಾಗಿ ಬದಲಾಗುತ್ತಿರುವುದು ಬಹಳ ವಿಷಾದನಿಯ ಸಂಗತಿ. 2023 ರ ಈ ವಿಶ್ವ ಮಾನಸಿಕ ಆರೋಗ್ಯ ದಿನದ ಆಚರಣೆಯ ಧ್ಯೇಯವಾಕ್ಯ “ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಜಾಗತಿಕ ಆದ್ಯತೆಯಾಗಲಿ” ಎಂಬುದಾಗಿದೆ. ಜಾಗತಿಕವಾಗಿ ಸುಮಾರು 150 ರಾಷ್ಟ್ರಗಳು ಈ ಆಚರಣೆಯಲ್ಲಿ ಭಾಗಿಯಾಗುತ್ತದೆ.
ಮಾನಸಿಕ ಒತ್ತಡದ ಲಕ್ಷಣಗಳು
ಮಾನಸಿಕ ಒತ್ತಡ ಎನ್ನುವುದು ಬಹಳ ಅಪಾಯಕಾರಿ ಮನೋಸ್ಥಿತಿಯಾಗಿದ್ದು, ದೇಹದಲ್ಲಿ ರಸದೂತಗಳ ಸ್ರವಿಸುವಿಕೆ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ರಸದೂತಗಳ ಏರಿಳಿತದಿಂದಾಗಿ ದೇಹದ  ಹೆಚ್ಚಿನ ಅಂಗಾಂಗಳ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಇದನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಹೆಚ್ಚಿನವರಿಗೆ ತಾವು ಒತ್ತಡದಲ್ಲಿ ಇದ್ದೇವೆ ಎಂಬುದರ ಬಗ್ಗೆ ಅರಿವೂ ಇರುವುದಿಲ್ಲ.
ಒತ್ತಡದಿಂದ ಉಂಟಾಗುವ ಅಡ್ಡ  ಪರಿಣಾಮಗಳನ್ನು  ಈ ಕೆಳಗಿನಂತೆ ಗುರುತಿಸಲಾಗಿದೆ.
1.ಕೂದಲು ಉದುರುವಿಕೆ:  ದಿನವೊಂದಕ್ಕೆ ಏನಿಲ್ಲಾವೆಂದರೂ ನೂರಕ್ಕಿಂತಲೂ ಹೆಚ್ಚು ಕೂದಲು ಉದುರುತ್ತದೆ ಮತ್ತು ಯಾಕಾಗಿ ಕೂದಲು ಉದುರುತ್ತದೆ ಎಂಬುದರ ಅರಿವು ವ್ಯಕ್ತಿಗೆ ಇರುವುದಿಲ್ಲ. ಅತಿಯಾದ ಒತ್ತಡದಿಂದ ದೇಹದ  ದೈನಂದಿನ  ಕಾರ್ಯಗಳಿಗೆ ಅಡ್ಡಿಯಾಗಿ ಕೂದಲು ಬೆಳೆಯುವಿಕೆಗೂ ಋಣಾತ್ಮಕ ಪರಿಣಾಮ ಬೀರುತ್ತದೆ.
2. ದೇಹದ ತೂಕದಲ್ಲಿ ವ್ಯತ್ಯಾಸವಾಗುವುದು:  ಅತಿಯಾದ ಮಾನಸಿಕ ಒತ್ತಡದಿಂದಾಗಿ ಹಸಿವಿಲ್ಲದಿರುವುದು ಕಂಡುಬರುತ್ತದೆ. ಇದರಿಂದಾಗಿ ದೇಹದ ತೂಕ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ದೇಹದ ಜೈವಿಕ ಕ್ರಿಯೆಗಳು ನಿಧಾನವಾಗಿ ದೇಹದ ತೂಕ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ಒಟ್ಟಿನಲ್ಲಿ ದೇಹದ ತೂಕ ವಿಪರೀತವಾಗಿ ವ್ಯತ್ಯಾಸವಾದಲ್ಲಿ ದೇಹದಲ್ಲಿ ಏನೋ ತೊಂದರೆ ಇದೆ ಎಂದರ್ಥ.
3.ಮಾನಸಿಕ ನೆಮ್ಮದಿ ಇಲ್ಲದಿರುವುದು: ದೇಹದಲ್ಲಿ ಒತ್ತಡ ಜಾಸ್ತಿಯಾದಾಗ ರಸದೂತಗಳ ಸ್ರವಿಸುವಿಕೆ ಜಾಸ್ತಿಯಾಗಿ  ಮನಸ್ಸು ಬಹಳ ಚಂಚಲವಾಗುತ್ತದೆ. ಎದೆಬಡಿತ ಜೋರಾಗುತ್ತದೆ. ಏನೋ ಒಂದು ರೀತಿಯ ಮಾನಸಿಕ ತುಮುಲ ಮತ್ತು ಅಶಾಂತಿ ಉಂಟಾಗುತ್ತದೆ. ನಿಂತಲ್ಲಿ  ನಿಲ್ಲಲಾಗದೆ, ಕುಳಿತಲ್ಲಿ ಕುಳಿತುಕೊಳ್ಳಲಾಗದೆ ಸದಾ ಚಡಪಡಿಕೆಯಿಂದ ವ್ಯಕ್ತಿ ಓಡಾಡುತ್ತಿರುತ್ತಾನೆ.
4. ಲೈಂಗಿಕ ನಿರಾಸಕ್ತಿ:  ಅತಿಯಾದ ಒತ್ತಡದಿಂದಾಗಿ ದೇಹದಲ್ಲಿನ ಲೈಂಗಿಕಾಸಕ್ತಿ ಕುದುರಿಸುವ ರಸದೂತಗಳ ಸ್ರವಿಸುವಿಕೆ ಕಡಿಮೆಯಾಗಿ ಲೈಂಗಿಕಾಸಕ್ತಿ ಕಡಿಮೆಯಾಗುತ್ತದೆ ಅದೇ ರೀತಿ ನಿಶ್ಯಕ್ತಿ ಮತ್ತು ಸಂತಾನ ಹೀನತೆಗೂ ಕಾರಣವಾಗುತ್ತದೆ.
5. ನಿದ್ರಾಹೀನತೆ: ಅತಿಯಾದ ಒತ್ತಡದಿಂದ ಮೆದುಳಿನ ಜೀವಕೋಶಗಳ ಮೇಲೆ ಬಹಳಷ್ಟು ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ದಿನವೊಂದಕ್ಕೆ ಆರೋಗ್ಯವಂತ ವ್ಯಕ್ತಿಗೆ 6 ರಿಂದ 8 ಗಂಟೆಗಳ ನಿದ್ರೆ ಅವಶ್ಯಕವಿರುತ್ತದೆ. ಆದರೆ ಮಾನಸಿಕ ಒತ್ತಡ ಇರುವವವರಿಗೆ ನಿದ್ರೆ ಬರುವುದಿಲ್ಲ. ನಿದ್ರೆ ಬಂದರೂ ಗಂಟೆ ಗಂಟೆಗೆ ನಿದ್ರೆಯಿಂದ ಗಾಬರಿಗೊಂಡು ಎಚ್ಚರವಾಗುತ್ತದೆ. ಅದೇ ರೀತಿ ನಿದ್ದೆಯ ಸಮಯದ ಪರಿವೆಯೂ ಇರುವುದಿಲ್ಲ.
6. ಮೂಡ್ ಬದಲಾವಣೆ: ಮಾನಸಿಕ ಒತ್ತಡದಿಂದ ಬಳಲುತ್ತಿರುವವರು ಬಹಳ ಕೋಪಿಷ್ಟರಾಗಿರುತ್ತಾರೆ. ಕಾರಣವಿಲ್ಲದೆ ಸಿಡುಕುವುದು, ಅಳುವುದು ಅಥವಾ ರೇಗಾಡುವುದು ಮಾಡುತ್ತಿರುತ್ತಾರೆ. ಕೆಲಸದಲ್ಲಿ ಯಾವುದೇ ರೀತಿಯ ಏಕಾಗ್ರತೆ ಇರುವುದಿಲ್ಲ, ಸದಾ ಮಾನಸಿಕ ಉದ್ವೇಗ, ದುಗುಡತೆ ಮತ್ತು ಮಾನಸಿಕ ಕಿರಿಕಿರಿಯಿಂದ ಬಳಲುತ್ತಿರುತ್ತಾರೆ, ಯಾರ ಬಳಿಯೂ ನೇರವಾಗಿ ವ್ಯವಹರಿಸುವ ವ್ಯವದಾನ ಅವರಿಗೆ ಇರುವುದಿಲ್ಲ.
7. ದೇಹದಲ್ಲಿ ನೋವು: ಅತಿಯಾದ ಒತ್ತಡವಿರುವವರಿಗೆ ದೇಹದ ಎಲ್ಲಾದರೊಂದು ಜಾಗದಲ್ಲಿ ನೋವು ಕಂಡುಬರುತ್ತದೆ. ಸ್ನಾಯುಗಳಲ್ಲಿ ಸೆಳೆತ, ಹೊಟ್ಟೆನೋವು, ತಲೆ ನೋವು, ಎದೆ ನೋವು. ಗ್ಯಾಸ್ಟಿಕ್ ಸಮಸ್ಯೆ ಹೀಗೆ ಏನಾದರೊಂದು ತೊಂದರೆ ಇದ್ದೆ ಇರುತ್ತದೆ., ದೇಹದಲ್ಲಿನ ರಸದೂತಗಳ ಅತಿಯಾದ ಏರಿಳಿತದಿಂದಾಗಿ ದೇಹದ ಯಾವುದಾದರೊಂದು ಅಂಗಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ನೋವಿನಲ್ಲಿ  ಪರ್ಯಯವಸಾನವಾಗುತ್ತದೆ.
8. ತಾಳ್ಮೆ ಕಳೆದುಕೊಳ್ಳುವುದು:  ದೈನಂದಿನ ವ್ಯವಹಾರದಲ್ಲಿ ಚಟುವಟಿಕೆಗಳ ಬಗ್ಗೆ ವಿಪರೀತವಾದ ನಿರಾಸಕ್ತಿ ಉಂಟಾಗುತ್ತದೆ. ಅತೀ ಹತ್ತಿರದ ಸಂಬಂಧಿಕರಲ್ಲಿ , ಆಪ್ತರಲ್ಲಿ ಕೂಡಾ ರೇಗಾಡುತ್ತಾರೆ, ಏನಾದರೊಂದು ಸಣ್ಣ ವಿಷಯಗಳಿಗೂ ಸ್ನೇಹಿತರಲ್ಲಿ ಜಗಳವಾಡುವುದು., ರೇಗಾಡುವುದು ಮಾಡುತ್ತಿರುತ್ತಾರೆ. ಕೆಲವೊಮ್ಮೆ ಯಾವುದೇ ನಿರ್ದಿಷ್ಠ ಕಾರಣವಿಲ್ಲದೆಯೂ ರೇಗಾಡುತ್ತಾರೆ, ಸದಾ ಸೂಜಿಗಲ್ಲಿನ ಮೇಲೆ ಕುಳಿತಿರುವವರ  ರೀತಿಯಲ್ಲಿ ಚಡಪಡಿಕೆ ಇವರಲ್ಲಿ ಕಂಡುಬರುತ್ತದೆ.
9. ಸದಾಕಾಲ ಕೆಲಸದ ಬಗ್ಗೆಯೇ ಚಿಂತೆ: ದಿನದ ಎಲ್ಲಾ  ಗಂಟೆಯೂ ಇವರು ಕೆಲಸದ ಬಗ್ಗೆಯೆ ಚಿಂತಿಸುತ್ತಿರುತ್ತಾರೆ ಕುಳಿತಲ್ಲಿ ನಿಂತಲ್ಲಿ, ಮಲಗಿದಾಗಲೂ ಇವರಿಗೆ ಕೆಲಸದ್ದೇ ಚಿಂತೆ. ಕುಂಟುಂಬದವರ ಜೊತೆ ಪ್ರವಾಸಕ್ಕೆ ಹೋದಾಗಲೂ   ಆಫೀಸಿನ  ವ್ಯವಹಾರದ ಬಗ್ಗೆ ಚಿಂತಿಸಿರುತ್ತಾರೆ. ಆಫೀಸು, ಹಣದ ವ್ಯವ ಹಾರ, ಆಫೀಸಿನ ಸಹದ್ಯೋಗಿ ಹಾಗೂ ಅವರ ಆಲೋಚನೆಗಳೆಲ್ಲವೂ ಆಫೀಸಿನ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತದೆ.
10. ಪದೇ ಪದೇ ದೇಹಕ್ಕೆ ಸೋಂಕು ತಗಲುವುದು:  ವಿಪರೀತ ಮಾನಸಿಕ ಒತ್ತಡವಿರುವಾಗ ರಸದೂತಗಳ ವೈಪರಿತ್ಯದಿಂದಾಗಿ ದೇಹದ ರಕ್ಷಣಾ  ಪ್ರಕಿಯೆಯ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತದೆ., ವ್ಯಕ್ತಿಯ ಬಿಳಿ ರಕ್ತಕಣಗಳು ಮತ್ತು ಇತರ ರಕ್ಷಣಾ ವ್ಯವಸ್ತೆ ಕುಸಿದು ಹೋಗಿ ರೋಗಿ ಬೇಗನೆ ನೆಗಡಿ, ಕೆಮ್ಮು ಅಥವಾ ಇನ್ನಾವುದೋ ಸೋಂಕು ರೋಗಗಳಿಗೆ ಪದೇ ಪದೇ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ರಕ್ತ ಹೀನತೆಯೂ ಉಂಟಾಗುವ ಸಾಧ್ಯತೆಯೂ ಇದೆ. ದೇಹದ ಜೀರ್ಣಾಂಗ ವ್ಯವಸ್ಥೆ ಹದೆಗೆಟ್ಟು ಪದೇ ಪದೇ ಮಲಬದ್ದತೆ ಮತ್ತು ಬೇದಿ ಉಂಟಾಗುವ ಸಾಧ್ಯತೆಯೂ ಇರುತ್ತದೆ. ತಲೆ ಸುತ್ತುವುದು, ವಾಕರಿಕೆ, ವಾಂತಿ ಮತ್ತು ಹಸಿವಿಲ್ಲದಿರುವುದು ಇವೆಲ್ಲವೂ ಒಟ್ಟು ಸೇರಿ ದೇಹದ ರಕ್ಷಣಾ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗುತ್ತದೆ.
ಕೊನೆಮಾತು
“ಆತ್ಮಹತ್ಯೆ ಮಹಾಪಾಪ” ಎಂದು ಬಲ್ಲವರು ಪದೇ ಪದೇ ಹೇಳುವ ಮಾತು. ಅದರೆ ಮನಸ್ಸಿನ ತೊಳಲಾಟ, ವಿಪರೀತ ನೋವು ಹತಾಶೆಯಿಂದಾಗಿ ಮನದ ಭಾವನೆಗಳೇ ಭಾರವಾದಾಗ, ಭವಿಷ್ಯದ ಬಗ್ಗೆ ಜಿಗುಪ್ಸೆ ಹುಟಿ,್ಟ  ಬದುಕೇ ಯಾತನಾಮಯವಾದಾಗ, ತಮ್ಮ ಅಸ್ತಿತ್ವವೇ ಅರ್ಥಹೀನವೆನಿಸಿ ಜನರು ಆತ್ಮಹತ್ಯೆಯಂತಹಾ ಹೆಡಿತನದ ಕೆಲಸಕ್ಕೆ ಮುಂದಾಗುತ್ತಾರೆ. ಆತ್ಮಹತ್ಯೆ ಹೇಡಿಗಳ ಲಕ್ಷಣ ಎಂದರೂ, ಆತ್ಮಹತ್ಯೆ ಮಾಡಿಕೊಳ್ಳಲು ಗಟ್ಟಿ ಗುಂಡಿಗೆ ಇರಬೇಕು ಎಂದರೂ ದ್ವಂದವಾದೀತು. ಅದೇನೇ ಇರಲಿ ಇತ್ತೀಚಿನ ದಿನಗಳಲ್ಲಿ ಯುವಜನತೆ ಹೆಚ್ಚು ಹೆಚ್ಚು ಈ ಆತ್ಮಹತ್ಯೆಗೆ  ಮುಂದಾಗುತ್ತಿರುವುದು, ನಮ್ಮ ಸಮಾಜ ಎತ್ತಕಡೆಗೆ ಸಾಗುತ್ತದೆ ಎಂಬುದರ ಮುನ್ಸೂಚನೆ ಎಂದರೂ ತಪ್ಪಗಲಾರದು. ಇಂದಿನ ವೇಗದ ಧಾವಂತದ, ಸರ್ಧಾತ್ಮಕ ಮತ್ತು ಯಾಂತ್ರಿಕ ಬದುಕಿನಲ್ಲಿ ಎಲ್ಲವೂ ಕಣ್ಣು ಮಿಟುಕಿಸುವುದರೊಳಗೆ ಆಗಿ ಹೋಗುತ್ತದೆ. ಆತಂಕ, ಖಿನ್ನತೆ, ಅತಿಯಾದ ಒತ್ತಡ, ಡೈವೋರ್ಸ್, ವರದಕ್ಷಿಣೆ, ಕೌಟುಂಬಿಕ ಹಿಂಸೆ, ಪ್ರೀತಿ ಪ್ರೇಮದ ವೈಫಲ್ಯ, ವ್ಯಾಪಾರದಲ್ಲಿ ನಷ್ಟ, ವಿವಾಹೇತರ ಸಂಬಂಧಗಳು, ಅರ್ಥಿಕ ಅಡಚಣೆ, ವಿಧ್ಯಾಬ್ಯಾಸದಲ್ಲಿ ಅನುತೀರ್ಣ, ನಿರುದ್ಯೋಗ, ಕಾಡುವ ಖಾಯಿಲೆ, ಮಕ್ಕಳಾಗದ ಕೊರಗು ಹೀಗೆ ನೂರಾರು ಕಾರಣಗಳು ಆತ್ಮಹತ್ಯೆಗೆ ಪ್ರಚೋದನೆ ನೀಡಲೂಬಹುದು. ಇಂತಹ ವ್ಯಕ್ತಿಗಳನ್ನು ಗುರುತಿಸಿ ಸಮಾಜ ಒಂದುಕ್ಷಣ ಅಂತಹ ವ್ಯಕ್ತಿಗಳಿಗೆ ಒಂದೆರಡು ಸಾಂತ್ವನದ ಸಿಹಿ ನುಡಿ ಹೇಳಿ ಸಂತೈಸಿದಲ್ಲಿ ‘ಒಂದು ಕ್ಷಣದ’ ಅಚಾತುರ್ಯವನ್ನು ತಡೆಯಬಹುದು. ಸಾಯಲು ನೂರು ಮಾರ್ಗವಿದ್ದರೆ ಬದುಕಲು ಸಾವಿರ ಮಾರ್ಗವಿದೆ ಎಂಬ ಸತ್ಯವನ್ನು ಯುವಜನರು ಅರ್ಥಮಾಡಿಕೊಳ್ಳಬೆಕು. ಬದುಕಿ, ಸಾಧಿಸಿ ತೋರಿಸಬೆಕಾದ ಹೊತ್ತಲ್ಲಿ  ಕ್ಷುಲ್ಲಕ ನೋವಿಗಾಗಿ ಸಾವಿಗೆ ಶರಣಾಗಿ ಹೇಡಿಗಳಾಗುವ ಬದಲು, ಛಲದಿಂದ ಜೀವನದ ಕಷ್ಟಕಾರ್ಪಣ್ಯಗಳನ್ನು ಎದುರಿಸಿ ಜೀವನದಲ್ಲಿ ಏನಾದರೂ ಸಾಧಿಸಿ ತೋರಿಸುವ ಗಟ್ಟಿತನವನ್ನು ಯುವಜನರು ಮೈಗೂಡಿಸಿಕೊಳ್ಳಬೇಕು .ಹಾಗಾದಲ್ಲಿ ಮಾತ್ರ  ಸುಂದರ ಸುದೃಡ ಸಮಾಜ ನಿರ್ಮಾಣವಾಗಬಹುದು
ಡಾ|| ಮುರಲೀ ಮೋಹನ್‍ಚೂಂತಾರು
MDS,DNB,MOSRCSEd(U.K), FPFA, M.B.A
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು
ಮೊ : 9845135787

More from the blog

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ ನಡೆಯಿತು. ಖತೀಬರಾದ ಅಸ್ವೀಫ್ ಧಾರಿಮಿ ಅವರು ನೇತೃತ್ವ ವಹಿಸಿ ಈದ್ ಸಂದೇಶವನ್ನು ಸಾರಿದರು.. ಪುರಸಭಾ ಸದಸ್ಯ ಅಬುಬಕ್ಕರ್ ಸಿದ್ದೀಕ್, ಎನ್‌.ಜೆ.ಎಮ್ ಮಸೀದಿ  ಇದರ ಅಧ್ಯಕ್ಷ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಏ.10ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ…. ರಿಸಲ್ಟ್​ ಚೆಕ್ ಮಾಡೋದು ಹೇಗೆ?

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ ಪ್ರಕಟಿಸಲಾಗುತ್ತಿದೆ. ಎಲ್ಲ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯವಾದ ಹಿನ್ನಲೆ ನಾಳೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಂದಾಗಿದೆ. ನಾಳೆ...

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...