Wednesday, October 25, 2023

ಮಾಣಿಲ ಶ್ರೀಧಾಮದಲ್ಲಿ ಶರನ್ನವರಾತ್ರಿ ಉತ್ಸವ ಧಾರ್ಮಿಕ ಸಭೆ 

Must read

ವಿಟ್ಲ: ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಬೆಳ್ಳಿಹಬ್ಬ ಮಹೋತ್ಸವದ ಶರನ್ನವರಾತ್ರಿ ಉತ್ಸವ ಅಂಗವಾಗಿ ಬುಧವಾರ ಚಂಡಿಕಾಹೋಮ, ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಧ್ಯಾತ್ಮ ಶಕ್ತಿಯ ಮೂಲಕ ದೇಶದಲ್ಲಿ ಸುಭಿಕ್ಷೆ ಕಾಣಬಹುದಾಗಿದೆ. ನಂಬಿಕೆಯೇ ದೇವರಾದಾಗ ನಮ್ಮೊಳಗೆ ದೈವೀಶಕ್ತಿಯ ಅನುಭೂತಿ ಉಂಟಾಗುತ್ತದೆ. ಇಚ್ಛಾಶಕ್ತಿ – ಕ್ರಿಯಾಶಕ್ತಿ – ಜ್ಞಾನ ಶಕ್ತಿ ಕ್ಷೇತ್ರದ ಧೀಶಕ್ತಿಯಾಗಿದೆ.ಅವದೂತರ ಕೃಪಾಕಟಾಕ್ಷದಲ್ಲಿ ಅಪಾರ ಶಕ್ತಿಯಿದ್ದು, ನಮಗೆ ಇದು ಪ್ರಾಪ್ತಿಯಾಗುವುದರಿಂದ ಉನ್ನತಿಗೇರಬಹುದು. ಸಮಾಜದ ಏಳಿಗಾಗಿ ಸಂತರೆಲ್ಲರನ್ನೂ ಒಟ್ಟುಗೂಡಿಸುವ ಕಾರ್ಯವಾಗಬೇಕು. ಮನೆ ಮನೆಯಲ್ಲಿ ಲಕ್ಷ್ಮೀ ಪೂಜೆಯನ್ನು ರಾಜ್ಯ ಹೊರರಾಜ್ಯಗಳಲ್ಲಿ ನಿರಂತರವಾಗಿ ನಡೆಸಬೇಕಾಗಿದೆ ಎಂದು ತಿಳಿಸಿದರು.

ಚಿತ್ರದುರ್ಗ ಕುಂಬಾರ ಗುರುಪೀಠ ಕುಂಬಾರ ಗುಂಡಯ್ಯ ಮಹಾಸಂಸ್ಥಾನದ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಆಶೀರ್ವಚನ ನೀಡಿ ಹಿಂದು ಸಮಾಜ ಸದಾ ಒಂದಾಗಿ ದೇಶ ಕಟ್ಟುವ ಕಾರ್ಯ ಮಾಡಬೇಕಾಗಿದೆ. ಭಕ್ತರಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಸಾಧುಸಂತರು ಜನಮಾನಸದಲ್ಲಿ ಸಾರ್ವಕಾಲಿಕವಾಗಿ ಉಳಿಯುತ್ತಾರೆ. ಸಮಾಜಕ್ಕೆ ಮಾರ್ಗದರ್ಶನ ನೀಡುವ ಜತೆಗೆ ಏಳಿಗೆಗಾಗಿ ಶ್ರಮಿಸುವ ಕಾರ್ಯವನ್ನು ಸ್ವಾಮೀಜಿಯವರು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಮಂಗಳೂರು ಎಂ.ಆರ್.ಪಿ.ಎಲ್. ನಿವೃತ್ತ ಜನರಲ್‌ ಮೆನೇಜರ್ (ತರಬೇತಿ) ವೀಣಾ ಟಿ. ಶೆಟ್ಟಿ, ಪುಣೆ ಉದ್ಯಮಿ ಭಾಸ್ಕರ್ ಶೆಟ್ಟಿ, ಮುಂಬಯಿ ಕುಲಾಲ ಸಂಘ ಅಧ್ಯಕ್ಷ ರಘು ಎ. ಮೂಲ್ಯ ಪಾದೆಬೆಟ್ಟು, ಉದ್ಯಮಿ ಗೋಪಾಲ ಮೂಲ್ಯ, ಹಳೆಗೇಟು ಶ್ರೀ ನಿತ್ಯಾನಂದ ಸ್ವಾಮಿ ಭಜನಾ ಮಂದಿರ ಅಧ್ಯಕ್ಷ ರವೀಂದ್ರ ಸಾಲಿಯಾನ್, ರಾಮಕೃಷ್ಣ ಕಾಟುಕುಕ್ಕೆ, ಮಾಣಿಲ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಶ್ರೀಧರ ಬಾಳೆಕಲ್ಲು, ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಮೋನಪ್ಪ ಭಂಡಾರಿ, ಕೋಶಾಧಿಕಾರಿ ಜಯರಾಜ್ ಪ್ರಕಾಶ್, ಮಹಿಳಾ ಸಮಿತಿಯ ಅಧ್ಯಕ್ಷೆ ವನಿತಾ.ವಿ ಶೆಟ್ಟಿ, ಗೌರವಾಧ್ಯಕ್ಷೆ ರೇವತಿ ಪೆರ್ನೆ ಉಪಸ್ಥಿತರಿದ್ದರು.

ಟ್ರಸ್ಟಿ ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ಬೆಳ್ಳಿ ಹಬ್ಬ ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿದರು. ಹೆಚ್.ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ಚಂಡಿಕಾಹೋಮ ನಡೆಯಿತು. ಬಳಿಕ ಸ್ವಾಮೀಜಿಯವರಿಂದ ಮಧುಕರಿ ಭಿಕ್ಷಾ ಸೇವೆ ನಡೆಯಿತು.

More articles

Latest article