Sunday, October 22, 2023

ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಅನುದಾನ ಹಂಚಿಕೆ: ಬಿಜೆಪಿ ಸದಸ್ಯರ ಕಡೆಗಣನೆ: ಹೋರಾಟಕ್ಕೆ ಸಿದ್ಧತೆ

Must read

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಗೆ ಸಂಬಂಧಿಸಿದ ಕ್ರಿಯಾಯೋಜನೆಯನ್ನು ತಯಾರಿಸುವ ಸಂದರ್ಭದಲ್ಲಿ ವಾರ್ಡಿನ ಸದಸ್ಯ ಹಾಗೂ ಪ್ರತೀ ವಾರ್ಡಿಗೆ ಆದ್ಯತೆ ನೀಡಿ ಮುಖ್ಯಾಧಿಕಾರಿ ಕ್ರಿಯಾಯೋಜನೆ ಸಿದ್ಧಪಡಿಸಬೇಕಾಗಿದ್ದರೂ, ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಕೇವಲ ಕಾಂಗ್ರೆಸ್ ಪಕ್ಷದ ಸದಸ್ಯರಿರುವ ವಾರ್ಡುಗಳಿಗೆ ಮಾತ್ರ ಆದ್ಯತೆ ನೀಡಿ, 12 ಮಂದಿ ಬಿಜೆಪಿ ಸದಸ್ಯರು ಗೆದ್ದಿರುವ ವಾರ್ಡುಗಳನ್ನು ನಿರ್ಲಕ್ಷಿಸಲಾಗಿದೆ. ನಗರೋತ್ಥಾನಕ್ಕೆ ಈ ಹಿಂದಿನ ಶಾಸಕರು ಮಂಜೂರುಗೊಳಿಸಿದ್ದ 74 ಲಕ್ಷ ಅನುದಾನವನ್ನು ಬಹುಮತ ಗಳಿಸಿದ ಬಿಜೆಪಿ ಸದಸ್ಯರ ಗಮನಕ್ಕೆ ತಾರದೇ ಬೇರೆ ಕಾಮಗಾರಿಗಳಿಗೆ ಮೀಸಲಿಡಲಾಗಿದೆ ಎಂದು ವಿಟ್ಲ ಪಟ್ಟಣ ಪಂಚಾಯತ್ ನ 12 ಮಂದಿ ಸದಸ್ಯರು ಆರೋಪಿಸಿದ್ದಾರೆ.

ವಿಟ್ಲ ಪಟ್ಟಣ ಪಂಚಾಯತ್ ನ ಸದಸ್ಯ, ಮಾಜಿ ಅಧ್ಯಕ್ಷ ಅರುಣ್ ವಿಟ್ಲ ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರವೇ ಇಲ್ಲದಾಗಿದೆ. 15 ನೇ ಹಣಕಾಸು ಯೋಜನೆಯಡಿಯಲ್ಲಿ ಕ್ರಮವಾಗಿ 2020-21, 2021-22, 2022-23ನೇ ಸಾಲಿನ ಉಳಿಕೆ ಹಣವಿದ್ದು, ಇದಕ್ಕೆ ಕ್ರಿಯಾಯೋಜನೆ ತಯಾರಿ ಆಗಬೇಕಾಗಿದೆ. ಈ ಮಧ್ಯೆ ಅಲ್ಲಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿವೆ. 18 ಸದಸ್ಯ ಬಲ ಹೊಂದಿರುವ ಪಟ್ಟಣ ಪಂಚಾಯತ್ ನಲ್ಲಿ ಅನ್ಯಾಯ ನಡೆಯುತ್ತಿರುವುದನ್ನು ಇನ್ನೂ ಸಹಿಸಿಕೊಳ್ಳಲು ಅಸಾಧ್ಯ. ಇದೇ ರೀತಿ ಮುಂದುವರಿದಲ್ಲಿ ಪಟ್ಟಣ ಪಂಚಾಯತ್ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು. ನ್ಯಾಯ ಸಿಗುವವರೆಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಟ್ಟಣ ಪಂಚಾಯತ್ ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿ, ಹರೀಶ್ ಸಿ.ಹೆಚ್, ಕರುಣಾಕರ ಗೌಡ, ಎನ್.ಕೃಷ್ಣ,‌ ಸಿ.ಹೆಚ್.ಜಯಂತ,‌ ಸಂಗೀತ, ವಿಜಯಲಕ್ಷ್ಮಿ, ರಕ್ಷಿತಾ, ಸುನೀತ, ಮೋಹನದಾಸ ಉಕ್ಕುಡ ಉಪಸ್ಥಿತರಿದ್ದರು.

More articles

Latest article