ಮಕ್ಕಳಲ್ಲಿ ಸಾಹಿತ್ಯ ಸದಭಿರುಚಿಯ ಅಗತ್ಯ. ಇದಕ್ಕಾಗಿ ಬಂಟ್ವಾಳ ತಾಲೂಕಿನ ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಶ್ರಮಿಸುತ್ತಿದೆ. ಮಕ್ಕಳ ಕಲಾ ಲೋಕದಿಂದ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತಿದೆ. ವಿದ್ಯಾರ್ಥಿಗಳು ಸ್ವಸಾಹಿತ್ಯ ರಚನೆ ಮತ್ತು ಸಾಹಿತ್ಯ ವಾಚನದ ಮಾಡಲು ಸಮಯವನ್ನು ಮೀಸಲಿಡಬೇಕು. ಮಕ್ಕಳ ಕಲಾಲೋಕದದ ಕಾರ್ಯಕ್ರಮಗಳ ಲಾಭವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದು ಕಲ್ಲಂಗಳ ಕೇಪು ಪ್ರೌಢ ಶಾಲಾ ವಿದ್ಯಾರ್ಥಿ ನಾಯಕ ಸಾಯಿ ಕುಮಾರ್ ಶರ್ಮ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ಕಲ್ಲಂಗಳ ಕೇಪು ಸರಕಾರಿ ಪ್ರೌಢ ಶಾಲೆಯಲ್ಲಿ ಉದಯಗಿರಿ ಕುದ್ದುಪದವು ಮತ್ತು ಅಜ್ಜಿನಡ್ಕ ಕ್ಲಸ್ಟರ್ಗಳ ಶಾಲಾ ಸಾಹಿತ್ಯಾಸಕ್ತ ಶಿಕ್ಷಕರಿಗೆ ಮಕ್ಕಳ ಕಲಾ ಲೋಕ ಸಂಘಟಿಸಿದ ಒಂದು ದಿನದ ಸಾಹಿತ್ಯ ಸ್ವರಚನೆ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಭಾಸ್ಕರ ಅಡ್ವಳ ಮತ್ತು ರಮೇಶ ಎಂ. ಬಾಯಾರು ಸಾಹಿತ್ಯ ಸ್ವರಚನೆ, ಸಾಹಿತ್ಯ ಸಂಘದ ರಚನೆ, ಶಾಲಾ ಭಿತ್ತಿ ಪತ್ರಿಕೆ ಮತ್ತು ಶಾಲಾ ವಾರ್ಷಿಕ ಹಸ್ತ ಪತ್ರಿಕೆ ತಯಾರಿಗಳ ಬಗ್ಗೆ ಮಾಹಿತಿ ನೀಡಿದರು. ಕಮ್ಮಟದಲ್ಲಿ ಶಿಕ್ಷಕರು ರಚಿಸಿದ ಹಸ್ತ ಪತ್ರಿಕೆಯನ್ನು ಕಲ್ಲಂಗಳ ಕೇಪು ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಮಾಲತಿ ಕಾನತಡ್ಕ ಬಿಡುಗಡೆಗೊಳಿಸಿದರು. ಸಿ.ಆರ್.ಪಿ. ಪುಷ್ಪಾ ಬಲ್ಲಾಳ್ ಶುಭ ಹಾರೈಸಿದರು. ಶಿವಕುಮಾರ್ ಸಾಯ ಅನಿಸಿಕೆ ಹೇಳಿದರು
ಕಮ್ಮಟದ ಪ್ರಾಯೋಜಕರಾದ ಕೇಪು ಕಲ್ಲಂಗಳ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಮಾಲತಿ ಕೆ ಸ್ವಾಗತಿಸಿದರು. ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಇದರ ಗೌರವ ಸಲಹೆಗಾರ ಭಾಸ್ಕರ ಅಡ್ವಳ ಪ್ರಸ್ತಾಪಿಸಿದರು ಮಕ್ಕಳ ಕಲಾಲೋಕದ ಕಾರ್ಯದರ್ಶಿ ಪುಷ್ಪಾ ಎಚ್ ನಿರೂಪಿಸಿದರು. ಖಜಾಂಚಿ ಕುಂಞ ನಾಯ್ಕ್ ವಂದಿಸಿದರು.