ಬೆಳ್ತಂಗಡಿ: ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಕರೇ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯ ಸೋಣಂದೂರು ಎಂಬಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಸೊಣಂದೂರು ನಿವಾಸಿ ಸುರೇಶ್ ಆಚಾರ್ಯ ಎಂಬರು ಹಲ್ಲೆಗೊಳಗಾದವರು. ಸುರೇಶ್ ಆಚಾರ್ಯ ಅವರ ಅಕ್ಕನ ಗಂಡ ವಾಮನ ಆಚಾರ್ಯ ಮತ್ತು ತಂಗಿ ಗಂಡ ರವಿ ಆಚಾರ್ಯ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಇವರೊಳಗೆ ತಕರಾರು ಇದ್ದು ಸುರೇಶ್ ಅವರು ಮನೆಯಲ್ಲಿ ಚಿನ್ನದ ಕೆಲಸ ಮಾಡುತ್ತಿದ್ದ ವೇಳೆ ಮನೆಯ ಅಂಗಳಕ್ಕೆ ಅಕ್ರಮಪ್ರವೇಶ ಮಾಡಿ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ.
ಗಾಯಗೊಂಡ ಸುರೇಶ್ ಆಚಾರ್ಯ ಅವರು ಬೆಳ್ತಂಗಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.