Sunday, October 22, 2023

ಸಂಚಾರ ನಿಯಮ ಉಲ್ಲಂಘನೆ : 207 ಮಂದಿಯ ಡ್ರೈವಿಂಗ್ ಲೈಸನ್ಸ್ ಅಮಾನತಿಗೆ ಮಂಗಳೂರು ಕಮಿಷನರ್ ಶಿಫಾರಸು

Must read

ಮಂಗಳೂರು: ವಾಹನ ಸಂಚಾರದ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಾಫಿಕ್ ಪೊಲೀಸರು ನಿತ್ಯ ಕಾರ್ಯಾಚರಣೆ ನಡೆಸುತ್ತಿದ್ದು, ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುತ್ತಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಆ.21ರಿಂದ ಸೆ.3ರ ಅವಧಿಯಲ್ಲಿ ಮೋಟಾರು ವಾಹನ ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ 207 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರ ಚಾಲನಾ ಅನುಜ್ಞಾ ಪತ್ರ ರದ್ದುಗೊಳಿಸುವಂತೆ ಸಾರಿಗೆ ಪ್ರಾಧಿಕಾರಕ್ಕೆ ಪೊಲೀಸರು ಮನವಿ ಸಲ್ಲಿಸಿದ್ದಾರೆ.

ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮವಾಗಿ ಡ್ರೈವಿಂಗ್ ಲೈಸನ್ಸ್ ರದ್ದುಗೊಳಿಸಲು ಪ್ರಾದೇಶಿಕ ಸಾರಿಗೆ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ಮಾಹಿತಿ ನೀಡಿದ್ದಾರೆ.

ಅತೀವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಮಾಡಿದ 59, ಮದ್ಯಸೇವಿಸಿ ವಾಹನ ಚಲಾಯಿಸಿದ 8, ಸರಕು ಸಾಗಾಟ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸಿರುವ 34, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದ 4, ಟ್ರಿಪಲ್ ರೈಡಿಂಗ್ ನಡೆಸಿದ 4, ಹೆಲ್ಮೆಟ್ ಧರಿಸದೆ ಸವಾರಿ ಮಾಡಿದ 79, ಸೀಟ್ ಬೆಲ್ಟ್ ಹಾಕದಿರುವ 6, ಏಕಮುಖ ಸಂಚಾರ, ನೋ ಎಂಟ್ರಿ ನಿಯಮ ಉಲ್ಲಂಘಿಸಿದ 13 ಹೀಗೆ ಅಮಾನತಿಗೆ ಪ್ರಸ್ತಾವನೆ ಸಲ್ಲಿಸಿರುವ ಪ್ರಕರಣಗಳು ಸೇರಿವೆ ಎಂದು ತಿಳಿಸಿದ್ದಾರೆ.

ಇನ್ನುಳಿದಂತೆ ವಿಶೇಷ ಕಾರ್ಯಾಚರಣೆಯಲ್ಲಿ ನಿಷೇಧಿತ ಸ್ಥಳದಲ್ಲಿ ವಾಹನ ಪಾರ್ಕಿಂಗ್ ವಿರುದ್ಧ 407, ಕರ್ಕಶ ಹಾರ್ನ್ ಬಳಕೆ ವಿರುದ್ಧ 45, ಟಿಂಟ್ ಗ್ಲಾಸ್ ಹಾಕಿರುವುದರ ವಿರುದ್ಧ 50 ಮತ್ತು ಬಸ್‌ಗಳ ಫುಟ್‌ಬೋರ್ಡ್‌ನಲ್ಲಿ ಸಂಚಾರ ಮಾಡಿದವರ ವಿರುದ್ಧ 174 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

More articles

Latest article