Sunday, October 22, 2023

ಕೈಕಂಬದ ಖಾಸಗಿ ಪ್ರಾಯೋಜಕತ್ವದಲ್ಲಿರುವ ಬಸ್‌ಶೆಲ್ಟರ್‌ಗೆ ಮತ್ತೆ ಮರುಜೀವ

Must read

ಬಿ.ಸಿ.ರೋಡ್ : ಇಲ್ಲಿನ ಕೈಕಂಬ ಜಂಕ್ಷನ್‌ನಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ, ಬಸ್ಸ್ ಶೆಲ್ಟರ್ ಇದ್ದರೂ ಸಿಕ್ಕಸಿಕ್ಕಲ್ಲಿ ಬಸ್ಸು ನಿಲುಗಡೆ ಮಾಡುವುದು, ಎದುರುಗಡೆ ವಾಹನಗಳು ಬರುತ್ತಿದ್ದರೂ ವಾಹನ ಸವಾರರಿಗೆ ಕ್ಯಾರೇ ಎನ್ನದೇ ವಿರುದ್ಧ ದಿಕ್ಕಿನಲ್ಲಿ ವಾಹನ ಸಂಚಾರ ಮಾಡುವುದಕ್ಕೆ ಈಗ ಬ್ರೇಕ್ ಬಿದ್ದಿದೆ. ಕಳೆದೆರಡು ದಿನಗಳಿಂದ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಿಂದ ಕಡಿವಾಣ ಹಾಕಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಖಾಸಗಿ ಪ್ರಾಯೋಜಕತ್ವದಲ್ಲಿ ಪುರಸಭೆಯಿಂದ ನಿರ್ಮಾಣವಾದ ಬಸ್‌ಶೆಲ್ಟರಿಗೆ ಮತ್ತೆ ಜೀವ ಬಂದಂತಾಗಿದೆ.
ಕೈಕಂಬ ಜಂಕ್ಷನ್‌ನಲ್ಲಿ ಸಿಸಿ ಕಣ್ಗಾವಲು ಇದ್ದರೂ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಕಾರುಗಳು ಹೀಗೆ ಹೆಚ್ಚಿನ ವಾಹನಗಳು ಪರ್ಲಿಯಾ, ನಂದರಬೆಟ್ಟು, ಅಲೆತ್ತೂರು ಕಡೆ ಹೋಗಲು ವಿರುದ್ಧ ರಸ್ತೆಯನ್ನೇ ಬಳಸುವುದು ಒಂದು ರೂಢಿಯಾಗಿ ಬೆಳೆದಿದೆ. ಯಾಕೆಂದರೆ ಸುತ್ತು ಬಳಿದು ಸಂಚಾರ ಮಾಡುವುದಕ್ಕಿಂತ ಇದೆ ಸುಲಭ ಎಂದು ವಾಹನ ಸವಾರರ ಅಲೋಚನೆ. ಆದರೆ ಇದರಿಂದ ತೊಂದರೆ ರಸ್ತೆಯಲ್ಲಿ ಪ್ರಾಮಾಣಿಕವಾಗಿ ಬರುವ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ. ಅಷ್ಟು ಮಾತ್ರವಲ್ಲದೇ ಕೈಕಂಬದಲ್ಲಿ ಮಂಗಳೂರಿಗೆ ತೆರಳುವ ಪ್ರಯಾಣಿಕರಿಗಾಗಿವಖಾಸಗಿ ಮತ್ತು ಸರಕಾರಿ ಬಸ್ಸುಗಳ ನಿಲುಗಡೆಗೆ ಪುರಸಭೆ ಮತ್ತು ಖಾಸಗಿ ಪ್ರಾಯೋಜಕತ್ವದಲ್ಲಿ ಬಸ್ ಶೆಲ್ಟರ್ ನಿರ್ಮಾಣ ಮಾಡಿದ್ದರೂ ಬಸ್ಸುಗಳೆಲ್ಲವೂ ಜಂಕ್ಷನ್‌ನಲ್ಲೇ ನಿಲುಗಡೆ ಮಾಡಿ ನಿರಂತರ ಟ್ರಾಫಿಕ್ ಜಾಮ್ ಉಂಟಾಗುವುದರ ಜೊತೆಗೆ ಪಾದಚಾರಿಗೆಳಿಗೆ, ರಸ್ತೆದಾಟುವವರಿಗೆ, ಹತ್ತಿರದಲ್ಲಿರುವ ಅಂಗಡಿಗಳಿಗೆ ತುಂಬಾ ತೊಂದರೆಯಾಗುತ್ತಿತ್ತು. ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ತಾಗಿಕೊಂಡೆ ಇರುವ ವಿದ್ಯುತ್ ಕಂಬದ ಅಡಿ ಭಾಗದಲ್ಲಿ ಜನರು ಕಾಯುವುದು ರೂಢಿಯಾಗಿತ್ತು. ಹಾಗಾಗಿ ಕೈಕಂಬ ಜಂಕ್ಷನ್ ಆಗಿ ಪರಿವರ್ತನೆಯಾಗಿತ್ತು.
ಇದನ್ನು ಮನಗಂಡು ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣಾಧಿಕಾರಿಗಳು ಖಾಸಗಿ ಬಸ್ಸು ಮಾಲಕರು ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಹೊಸರೀತಿಯ ಯೋಜನೆ ರೂಪಿಸಿದರು. ಬೆಳಿಗ್ಗೆ ೮ರಿಂದ ರಾತ್ರಿ ೮ರ ವರೆಗೆ ಮೂರು ಅವಧಿಗಳನ್ನಾಗಿ ವಿಂಗಡಿಸಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿ ಜಂಕ್ಷನ್‌ನಲ್ಲಿ ನಿಲುಗಡೆ ಮಾಡುವ ಬಸ್ಸು ಚಾಲಕರಿಗೆ ಕೂಡಲೇ ದಂಡ, ಹಾಗೂ ವಿರುದ್ಧ ದಿಕ್ಕಿನಲ್ಲಿ ತೆರಳುವ ವಾಹನಗಳು ನಿಲ್ಲಿಸದಿದ್ದಲ್ಲಿ ಮೊಬೈಲ್ ಮೂಲಕ ಪೋಟೋ ತೆಗೆದು ವಾಹನದ ಮಾಲಕರಿಗೆ ಕೂಡಲೇ ಹಳದಿ ಕಾರ್ಡ್ ನೋಟೀಸು ಕಳುಹಿಸುವುದು, ಅಷ್ಟು ಮಾತ್ರವಲ್ಲದೇ ಸಾರ್ವಜನಿಕರು , ಬಸ್ಸಿಗಾಗಿ ಕಾಯುವವರಿಗೆ ಅವರಿಗೆ ಮನವರಿಕೆ ಮಾಡಿ ನಿಲ್ದಾಣದ ಸ್ಥಳವನ್ನು ತಿಳಿಸುವುದು. ಹೀಗೆ ಕಳೆದರಡು ದಿನಗಳಿಂದ ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತಂದಿದ್ದಾರೆ.
ಇನ್ನೂ ಆಗಬೇಕಿರುವುದು : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಜಂಕ್ಷನ್‌ನಲ್ಲಿ ಇರುವ ಝೀಬ್ರ ತೆಗೆದಿದ್ದು ಡಾಮರೀಕರಣ ಮಾಡಿದ ನಂತರ ಝೀಬ್ರಾ ಕ್ರಾಸಿಂಗ್ ಮಾಡುವುದನ್ನೇ ಮರೆತು ಹೋಗಿದ್ದಾರೆ. ಜಂಕ್ಷನ್‌ನಲ್ಲಿ ಝೀಬ್ರಾ ಕ್ರಾಸಿಂಗ್ ಅಗತ್ಯವಾಗಿರುತ್ತದೆ. ಬಸ್ ಶೆಲ್ಟರ್ ಬಳಿ ಕುಡಿಯುವ ನೀರಿನ ವ್ಯವಸ್ಥೆ, ಬಸ್ ಶೆಲ್ಟರ್‌ನ ಸುತ್ತಲೂ ಸ್ವಚ್ಛತೆಗೆ ಆದ್ಯತೆ, ಸಾರ್ವಜನಿಕ ಶೌಚಾಲಯದ ವ್ಯವಸ್ಥೆ, ಹಿರಿಯ ನಾಗರಿಕರಿಗೆ ಇಲ್ಲವೇ ಅನಾರೋಗ್ಯವಂತರು ಬಸ್ಸು ಬರುವರೆಗೆ ಕಾಯಲು ಸೂಕ್ತವಾದ ಆಸನ ವ್ಯವಸ್ಥೆ ಹೀಗೆ ಅತ್ಯಗತ್ಯ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಕಲ್ಪಿಸಿದರೆ ಕೈಕಂಬದಲ್ಲೊಂದು ಸುಸಜ್ಜಿತ ಬಸ್ ಶೆಲ್ಟರ್, ನಿರ್ಮಾಣವಾದಂತಾಗುತ್ತೆ.

ಸ್ಟ್ರೀಟ್ ಲೈಟ್, ರಾಷ್ಟ್ರೀಯ ಹೆದ್ದಾರಿ ದಾಟಲು ಝೀಬ್ರಾ ಕ್ರಾಸಿಂಗ್ ಹೀಗೆ ಅನೇಕ ಉತ್ತಮವಾದ ಯೋಜನೆಗಳನ್ನು ಹಾಕಿದ್ದು, ಆದಷ್ಟು ಬೇಗ ಅದಕ್ಕೆ ಮತ್ತೆ ಮರುಜೀವ ಬಂದು ಈ ಭಾಗದ ಸಾರ್ವಜನಿಕರಿಗೆ, ಅಂಗಡಿ ಮುಂಗಟ್ಟುಗಳ ಗ್ರಾಹಕರಿಗೆ ಹಾಗೂ ಮಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಇನ್ನಷ್ಟು ಪ್ರಯೋಜನ ಸಿಗುವಂತಾಗಲಿ.

ಕೈಕಂಬದಲ್ಲಿ ಜಂಕ್ಷನ್‌ನಲ್ಲಿ ಬಸ್ಸುಗಳ ನಿಲುಗಡೆಯಿಂದ ಸಾರ್ವಜನಿಕರಿಗೆ ಆಗುವ ತೊಂದರೆಯಾಗುವುದನ್ನು ತಪ್ಪಿಸಲು ಸಂಚಾರಿ ಅರಕ್ಷಕ ಠಾಣೆ ಮತ್ತು ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಇವರಿಗೆ ಬಸ್ ಶೆಲ್ಟರ್ ಸಮೀಪ ಬಸ್ಸುಗಳನ್ನು ನಿಲುಗಡೆ ಮಾಡಲು ಫೆಬ್ರವರಿ ೧೨, ೨೦೨೧ರಂದು ಬಂಟ್ವಾಳ ಪುರಸಭೆಯಿಂದ ಪತ್ರ ಮುಖೇನ ತಿಳಿಸಿದ್ದು ಇದೀಗ ಎರಡೂ ಇಲಾಖೆಯಿಂದಲೂ ಸ್ಪಂದನ ಸಿಕ್ಕಿದ್ದು ತುಂಬಾ ಸಂತೋಷವಾಗಿದೆ. ಇಂತಹ ಇಲಾಖೆಗಳಿಂದ ಇನ್ನಷ್ಟು ಜನೋಪಯೋಗಿ ಕೆಲಸಗಳು ಮಾಡುವಂತಾಗಲಿ.
– ಮಹಮ್ಮದ್ ಶರೀಪ್, ಮಾಜಿ ಅಧ್ಯಕ್ಷರು ಬಂಟ್ವಾಳ ಪುರಸಭೆ

ಬಿ.ಸಿ.ರೋಡು ಕೈಕಂಬದಲ್ಲಿ ಜಂಕ್ಷನಲ್ಲೇ ಬಸ್ಸು ನಿಲುಗಡೆಯಾಗಿ ತುಂಬಾ ತೊಂದರೆಯಾಗುತ್ತಿತ್ತು. ಬಸ್‌ಬೇ ಇದ್ದರೂ ಅದರ ಉಪಯೋಗ ಯಾರಿಗೂ ಆಗುತ್ತಿರಲಿಲ್ಲ. ಖಾಸಗಿ ಮತ್ತು ಕೆಎಸ್‌ಆರ್‌ಟಿ ಬಸ್ ಅಧಿಕಾರಿಗಳು ನಮ್ಮ ಮನವಿಗೆ ಮನಗಂಡು ಸ್ಪಂದನೆ ನೀಡಿದ್ದಾರೆ. ಝೀಬ್ರಾ ಕ್ರಾಸಿಂಗ್ ಗುರುತು ಹಾಕಲು ಸ್ಥಳೀಯ ಪುರಸಭೆ ಮತ್ತು ಹೆದ್ದಾರಿ ಇಲಾಖೆಗೆ ಪತ್ರ ಮುಖೇನ ತಿಳಿಸಲಾಗಿದೆ. ಅಷ್ಟು ಮಾತ್ರವಲ್ಲದೇ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ಪಾರ್ಕಿಂಗ್ ನಿಲುಗಡೆಗೂ ಕಡಿವಾಣ ಹಾಕಲಾಗಿದೆ.
ಸುತೇಶ್, ಠಾಣಾಧಿಕಾರಿ, ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆ

More articles

Latest article