ಬಂಟ್ವಾಳ : ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಇದರ ಆಶ್ರಯದಲ್ಲಿ “ಮಾದಕ ವಸ್ತುಗಳ ಬಳಕೆ ವಿರುದ್ಧ ಕಾರ್ಯಾಗಾರ” ವು ಪಾಣೆಮಂಗಳೂರು ಸಾಗರ್ ಆಡಿಟೋರಿಯಂನಲ್ಲಿ ಸೆಪ್ಟೆಂಬರ್ 08 ಶುಕ್ರವಾರ ಅಪರಾಹ್ನ 3.30ಕ್ಕೆ ನಡೆಯಲಿದೆ.
ಕಾರ್ಯಾಗಾರವನ್ನು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಉದ್ಘಾಟಿಸಲಿದ್ದು, ಸಂಯುಕ್ತ ಜಮಾಅತ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಸಿ.ಬಿ. ರಿಷ್ಯoತ್ ಅತಿಥಿಗಳಾಗಿ ಭಾಗವಹಿಸುವರು, ಪ್ರೇರಣಾ ಭಾಷಣಗಾರರು ಮತ್ತು ಆಪ್ತ ಸಮಾಲೋಚಕರಾಗಿ ಸಂಪನ್ಮೂಲ ವ್ಯಕ್ತಿ ರಫೀಕ್ ಮಾಸ್ಟರ್ ಭಾಗವಹಿಸಲಿದ್ದಾರೆ ಎಂದು ಕಾರ್ಯದರ್ಶಿ ನೋಟರಿ ಕೆ. ಅಬೂಬಕರ್ ವಿಟ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಚಟಗಳು ಚಟ್ಟಕ್ಕೆ ಮೂಲ, ವ್ಯಸನಗಳು ವ್ಯಕ್ತಿತ್ವಕ್ಕೆ ಶೂಲ” ಎಂಬ ನುಡಿಗಳು ಮಾದಕ ವಸ್ತುಗಳ ಸೇವನೆಯ ಘನಘೋರ ಬಾಧಕ ಪರಿಣಾಮಗಳಿಗೆ ಕನ್ನಡಿಯಂತಿದೆ. ಒಂದು ಬಾರಿ ಮಾದಕ ವಸ್ತುಗಳ ಸೇವನೆಗೊಳಗಾದರೆ ಅದು ನಿಸ್ಸಂದೇಹವಾಗಿ ಚಟವಾಗುತ್ತದೆ. ಮಾದಕ ಸೇವನೆಯು ಚಟವಾದರೆ, ಅದರಿಂದ ಮುಕ್ತಿ ಸುಲಭದ ಮಾತಲ್ಲ. ಮಾದಕ ವ್ಯಸನವು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಮನುಷ್ಯನನ್ನು ಮತ್ತು ಅವನ ಕುಟುಂಬವನ್ನು ಸಂತ್ರಸ್ತಗೊಳಿಸುತ್ತದೆ. ಇಂದು ಮಾದಕ ಪದಾರ್ಥ ಸೇವನೆಗೆ ಶಾಲಾ ಕಾಲೇಜುಗಳ ಮುಗ್ಧ ವಿದ್ಯಾರ್ಥಿಗಳೂ ಬಲಿಯಾಗುತ್ತಿದ್ದಾರೆ. ಲಿಂಗ ಮತ್ತು ವಯಸ್ಸುಗಳ ತಾರತಮ್ಯವಿಲ್ಲದೆ ನಾನಾ ಬಗೆಗಳಲ್ಲಿ ಮಾದಕ ವಸ್ತುಗಳು ಸಮಾಜಕ್ಕೆ ಶಾಪವಾಗಿ ಪರಿಣಮಿಸಿದೆ. ಸಮಾಜ ಘಾತುಕರು ತಮ್ಮ ಹಣದ ದಾಹಕ್ಕೆ ಜನರನ್ನು ಮಾದಕ ವಸ್ತುಗಳಿಗೆ ಬಲಿ ಪಡೆಯುತ್ತಿರುವುದು ಬಹಳ ಖೇದಕರ ವಿಚಾರ. ಮಾದಕವೆಂಬ ವಿಷವು ವ್ಯಕ್ತಿಯನ್ನು ನಿಧಾನವಾಗಿ ನುಂಗುತ್ತದೆ ಮಾತ್ರವಲ್ಲ ಅವನ ಜೀವನವನ್ನೇ ಸರ್ವನಾಶ ಮಾಡುತ್ತದೆ. ಸಮಾಜ ಘಾತುಕ ಶಕ್ತಿಗಳು ಹೊಗೆ ಸೊಪ್ಪು, ಅಫೀಮು, ಗಾಂಜಾ ಮುಂತಾದವುಗಳನ್ನು ಆಯ್ದ ಶಾಲಾ ಕಾಲೇಜುಗಳ ಆವರಣದಲ್ಲಿ ಮುಗ್ಧ ವಿದ್ಯಾರ್ಥಿಗಳಿಗೆ ಸರಬರಾಜು ಮಾಡುತ್ತಿರುವ ಭಯಾನಕ ವಿಚಾರವೂ ಬೆಳಕಿಗೆ ಬಂದಿದೆ.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಹೆತ್ತವರಿಗೆ ಮತ್ತು ಜನಸಾಮಾನ್ಯರಿಗೆ ಜಮಾಅತ್ ಮಟ್ಟದಲ್ಲಿ ತಿಳುವಳಿಕೆ ನೀಡಲು ನೆರವಾಗುವ ನಿಟ್ಟಿನಲ್ಲಿ “ಮಾದಕ ವಸ್ತುಗಳ ಸೇವನೆ ಮುಕ್ತ ಕಾರ್ಯಗಾರ” ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ತಾಲೂಕಿನ ಎಲ್ಲಾ ಮಸೀದಿಗಳ ಪದಾಧಿಕಾರಿಗಳು ಹಾಗೂ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಯುಕ್ತ ಜಮಾಅತ್ ಪತ್ರಿಕಾ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ವಿನಂತಿಸಿದ್ದಾರೆ.