Wednesday, October 18, 2023

ಇಂದು ಶೂನ್ಯ ನೆರಳು ದಿನ

Must read

ಮಂಗಳೂರು: ಆ.18 ಶೂನ್ಯ ನೆರಳಿನ ದಿನವಾಗಿದ್ದು, ಬೆಳಗ್ಗೆ ಸೂರ್ಯನ ಬೆಳಕು ವ್ಯಕ್ತಿಯ ಮೇಲೆ ಬಿದ್ದಾಗ, ಆ ನೆರಳು ಉದ್ದವಾಗಿರುತ್ತದೆ. ಮಧ್ಯಾಹ್ನವಾಗುತ್ತಿದ್ದಂತೆ ನೆರಳು ಶೂನ್ಯವಾಗುತ್ತದೆ. ಪುನಃ ಸಾಯಂಕಾಲ ನೆರಳು ಉದ್ದವಾಗುತ್ತದೆ. ಪ್ರತಿಯೊಬ್ಬರು ಇದನ್ನು ವೀಕ್ಷಿಸಬಹುದು. ಇಂತಹ ವಿದ್ಯಮಾನ ವರ್ಷದಲ್ಲಿ ಎರಡು ಬಾರಿ ಮಾತ್ರ ಸಂಭವಿಸುತ್ತದೆ.

ಮಂಗಳೂರಿನಲ್ಲಿ ಆಗಸ್ಟ್ 18 ಮತ್ತು ಎಪ್ರಿಲ್ 24 ಶೂನ್ಯ ದಿನವಾಗಿರುತ್ತದೆ. ಈ ಶೂನ್ಯ ನೆರಳಿನ ವಿದ್ಯಮಾನವು ಉತ್ತರ ಅಕ್ಷಾಂಶ 23.5ಡಿಗ್ರಿ ಮತ್ತು ದಕ್ಷಿಣ ಅಕ್ಷಾಂಶ 23.5 ಡಿಗ್ರಿ ಒಳಗಿನ ಸ್ಥಳಗಳಲ್ಲಿ ಅಕ್ಷಾಂಶದ ಮೇಲೆ ಹೊಂದಿಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಸಂಭವಿಸುತ್ತದೆ.

ಉತ್ತರಾಯಣದಲ್ಲಿ ಡಿಸೆಂಬರ್ 21ರಿಂದ ಜೂನ್ 21 ಸೂರ್ಯ ಕರ್ಕಾಟಕ ಸಂಕ್ರಾಂತಿ ವೃತ್ತದಡೆಗೆ ಸಾಗುವಾಗ ಮತ್ತು ದಕ್ಷಿಣಾಯಣದಲ್ಲಿ ಜೂನ್ 21ರಿಂದ ಡಿಸೆಂಬರ್ 21 ಮಕರ ಸಂಕ್ರಾತಿ ವೃತ್ತದೊಳಗೆ ಸಾಗುವ ಸಮಯದಲ್ಲಿ ಸೂರ್ಯ ನಡು ನೆತ್ತಿಯ ಮೇಲೆ ಹಾದುಹೋಗುವ ಸಂದರ್ಭದಲ್ಲಿ ಭೂಮಿಯ ಮೇಲೆ ಲಂಬವಾಗಿರುವ ವಸ್ತುಗಳು ಶೂನ್ಯ ನೆರಳನ್ನು ತೋರಿಸುವ ಈ ವಿದ್ಯಮಾನ ಸಂಭವಿಸುತ್ತದೆ.

ಈ ವಿಶೇಷ ವಿದ್ಯಮಾನ ವೀಕ್ಷಿಸಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ಕೆಲವು ಪ್ರಾತ್ಯಕ್ಷಿಕೆಗಳನ್ನು ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದೆ. ಆಸಕ್ತರಿಗೆ ವೀಕ್ಷಿಸಲು ಅವಕಾಶವಿದೆ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ

More articles

Latest article