ಬಂಟ್ವಾಳ: ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ ಇದರ ಹತ್ತನೇ ವರ್ಷಾಚರಣೆಯ ಪ್ರಯುಕ್ತ, ದಿ. ಡಾ. ಬಿ.ಅಹ್ಮದ್ ಹಾಜಿ ಅವರ 3ನೇ ವರ್ಷದ ಸ್ಮರಣಾರ್ಥ, ಕ್ರೆಸೆಂಟ್ ಯಂಗ್ ಮೆನ್ಸ್ ಅಸೋಸಿಯೇಶನ್ (ರಿ.) ತುಂಬೆ ಇದರ ವತಿಯಿಂದ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ರವಿವಾರ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ರೆ. ಫಾ. ಸಿಲ್ವಸ್ಟರ್ ವಿನ್ಸೆಂಟ್ ಲೋಬೋ, ರಕ್ತದಾನದ ಮಹತ್ವ, ಪ್ರಸಕ್ತ ಉಂಟಾಗಿರುವ ರಕ್ತದ ಕೊರತೆ ಬಗ್ಗೆ ವಿವರಿಸಿದರು.
ತುಂಬೆ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಬಿ.ಅಬ್ದುಲ್ ಕಬೀರ್ ಅವರು, ದಿ. ಡಾ. ಬಿ.ಅಹ್ಮದ್ ಹಾಜಿ ಅವರು ಸಮಾಜಕ್ಕೆ ಸಲ್ಲಿಸಿರುವ ಸೇವೆ, ಸಾಮಾಜಿಕ ಕಳಕಲಿ, ಶಿಕ್ಷಣದ ಮೇಲಿದ್ದ ಕಾಳಜಿ ಬಗ್ಗೆ ಸ್ಮರಣಿಸಿದರು.
ತುಂಬೆ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಇಮ್ತಿಯಾಝ್ ಆಲ್ಫಾ ಮಾತನಾಡಿದರು. ಕ್ರೆಸೆಂಟ್ ಯಂಗ್ ಮೆನ್ಸ್ ಅಧ್ಯಕ್ಷ ಮುಹಮ್ಮದ್ ಇರ್ಫಾನ್, ಎಸ್ಸೆಸ್ಸೆಫ್ ತುಂಬೆ ಶಾಖೆ ಅಧ್ಯಕ್ಷ ಮುಹಮ್ಮದ್ ಅಮೀನ್, ತುಂಬೆ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಅಝೀಝ್, ಝಹೂರ್ ಅಹ್ಮದ್, ಉಚ್ಚಿಲ ಬಿಲ್ಡರ್ ಹಾಗೂ ಡೆವಲಪರ್ಸ್ ಮಾಲಕ ಆದಂ ಸಲಾಂ ಉಚ್ಚಿಲ ಉಪಸ್ಥಿತರಿದ್ದರು.
.ಶೈಕ್ಷಣಿಕ ಸಾಧನೆ ಮಾಡಿದ ಮುಹಮ್ಮದ್ ಇರ್ಫಾನ್ ಮತ್ತು ಮುಹಮ್ಮದ್ ಫಾರೀಶ್ ಖಾದರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪತ್ರಕರ್ತ ಇಮ್ತಿಯಾಝ್ ಶಾ ಪ್ರಾಸ್ತಾವಿಸಿ ಸ್ವಾಗತಿಸಿದರು. ಟಿಪ್ಪು ಸುಲ್ತಾನ್ ಕಾಲೇಜಿನ ಪ್ರಾಂಶುಪಾಲ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.