ಸುಬ್ರಹ್ಮಣ್ಯ: ದೇವರನಾಡು ಕೇರಳದಲ್ಲಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.ಆದರೆ ಇತರ ಕಡೆಗಳಲ್ಲಿ ಕೂಡಾ ಈ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರಜೆಗಳ ಯೋಗಕ್ಷೇಮಕ್ಕಾಗಿ ಅತ್ಯುತ್ತಮ ಆಡಳಿತ ಮಾಡಿದ ಬಲಿಚಕ್ರವರ್ತಿಗೆ ಈ ಹಬ್ಬವನ್ನು ಸಮರ್ಪಿಸಲಾಗುತ್ತದೆ. ವಿಷ್ಣುವಿನ ವರದಂತೆ ಪ್ರತಿವರ್ಷ ಬಲಿಚಕ್ರವರ್ತಿಯು ಭೂಮಿಗೆ ಬಂದು ತನ್ನ ಪ್ರಜೆಗಳನ್ನು ಭೇಟಿಯಾಗುವ ದಿನವನ್ನು ಓಣಂ ಹಬ್ಬವಾಗಿ ಆಚರಿಸಲಾಗುತ್ತದೆ.ಈ ಹಬ್ಬವು ಸಂಪತ್ತಿನ ಸಂಕೇತವಾಗಿದೆ. ಉತ್ತಮ ಬೆಳೆಯಾಗಿ ಸಮೃದ್ಧಿಯ ಔನತ್ಯಕ್ಕಾಗಿ ಪ್ರಾರ್ಥಿಸುವ ಹಬ್ಬವೇ ಓಣಂ ಆಗಿದೆ ಎಂದು ಎಸ್‌ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಎಸ್‌ಎಸ್‌ಪಿಯು ಕಾಲೇಜು ಮತ್ತು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಮಂಗಳವಾರ ಕಾಲೇಜಿನಲ್ಲಿ ನಡೆದ ಓಣಂ ಆಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಭೂಮಿ ತಾಯಿಯು ಒದಗಿಸುವ ಸಮೃದ್ಧ ಫಸಲಿನಿಂದಾಗಿ ಜನತೆ ಸುಖ ಜೀವನ ನಡೆಸುವ ಕಾರಣ ಈ ದಿನ ಭೂಮಿ ತಾಯಿಗೆ ಪೂಜೆ ಪುರಸ್ಕಾರ ಮಾಡಿ ತಾಯಿಯ ಆಶೀರ್ವಾದ ಪಡೆಯಲಾಗುತ್ತದೆ.ಈ ದಿನ ಬಲಿ ಚಕ್ರವರ್ತಿಯ ಸ್ವಾಗತಕ್ಕೆ ವಿಶೇಷವಾಗಿ ಹೂವಿನ ರಂಗೋಲಿ ಹಾಕಲಾಗುತ್ತದೆ ಎಂದರು.
ಬೃಹತ್ ಪೂಕಳಂ:
ಓಣಂ ಆಚರಣೆಯ ನಿಮಿತ್ತ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಬೃಹತ್ ಪೂಕಳಂ ರಚಿಸಿದ್ದರು.ಸೇವಂತಿಗೆ, ಮಲ್ಲಿಗೆ, ಕನಕಾಂಬರ, ತುಳಸಿ, ಗುಲಾಬಿ, ದಾಸವಾಳ, ಗೋರಟೆ ಮೊದಲಾದ ಹೂವುಗಳನ್ನು ಬಳಸಿ ವಿದ್ಯಾರ್ಥಿಗಳು ಆಕರ್ಷಕವಾಗಿ ಹೂವಿನ ರಂಗೋಲಿ ಬಿಡಿಸಿದ್ದರು.ಈ ರಂಗೋಲಿಯ ನಡುವೆ ದೀಪವನ್ನು ಇರಿಸಲಾಗಿತ್ತು.ದೀಪ ಬೆಳಗುವ ಮೂಲಕ ಆಚರಣೆಗೆ ಕಾಲೇಜಿನ ವಿದ್ಯಾರ್ಥಿ ಸಂಘದ ಸಂಚಾಲಕ ಜಯಪ್ರಕಾಶ್ ಆರ್ ಚಾಲನೆ ನೀಡಿದರು.ಈ ಸಂದರ್ಭ ಸಂಸ್ಕೃತ ಉಪನ್ಯಾಸಕ ಡಾ.ಪ್ರಜ್ವಲ್.ಜೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂತ್ರಪಠಣ ಮಾಡಿದರು.
ಈ ಸಂದರ್ಭ ಸಾಂಸ್ಕೃತಿಕ ತಂಡದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ಎನ್‌ಎಸ್‌ಎಸ್ ಯೋಜನಾಧಿಕಾರಿ ಭವ್ಯಶ್ರೀ ಹರೀಶ್ ಕುಲ್ಕುಂದ, ರೆಡ್‌ಕ್ರಾಸ್ ಸಂಯೋಜಕಿ ಶ್ರುತಿ ಯಾಲದಾಳು, ರೋರ‍್ಸ್ ಮತ್ತು ರೇಂರ‍್ಸ್ ನಾಯಕ ಪ್ರವೀಣ್ ಎರ್ಮಾಯಿಲ್, ಸ್ಟಾಪ್ ಸೆಕ್ರೇಟರಿ ಗಿರೀಶ್, ಉಪನ್ಯಾಸಕರಾದ ಜಯಶ್ರೀ.ವಿ.ದಂಬೆಕೋಡಿ, ಮನೋಜ್ ಕುಮಾರ್ ಬಿ.ಎಸ್, ರತ್ನಾಕರ ಎಸ್, ಶ್ರೀಧರ್ ಪುತ್ರನ್, ಸುಧಾ, ಸೌಮ್ಯಾ, ಶ್ಯಾಮಿಲಿ, ಪೂರ್ಣಿಮಾ ಸೇರಿದಂತೆ ಎನ್‌ಎಸ್‌ಎಸ್ ಸ್ವಯಂಸೇವಕರು, ವಿದ್ಯಾರ್ಥಿಗಳು, ಸಿಬಂದಿಗಳು ಉಪಸ್ಥಿತರಿದ್ದರು.