Wednesday, October 18, 2023

ಸೌಜನ್ಯ ಸಾವಿಗೆ ನ್ಯಾಯ ಸಿಗಲು ವಿ.ಹಿಂ. ಪರಿಷತ್, ಭಜರಂಗದಳದಿಂದ ಪಾದಯಾತ್ರೆ ; ತಾಯಿ ಮುಂದೆ ಅಣ್ಣಪ್ಪ ಬೆಟ್ಟದಲ್ಲಿ ಪ್ರಮಾಣ ಮಾಡಿದ ಧೀರಜ್‌, ಮಲ್ಲಿಕ್, ಉದಯ್ ಜೈನ್

Must read

ಬೆಳ್ತಂಗಡಿ: ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಸಿಗಬೇಕೆಂದು ವಿಶ್ವ ಹಿಂದು ಪರಿಷತ್ ಭಜರಂಗ ದಳದ ಬೆಳ್ತಂಗಡಿ ಪ್ರಖಂಡದ ವತಿಯಿಂದ ಪಾದಯಾತ್ರೆ ನಡೆಯಿತು.

ನೇತ್ರಾವತಿ ಸ್ನಾನಘಟ್ಟದಿಂದ ಧರ್ಮಸ್ಥಳ ಕ್ಷೇತ್ರದ ಬಳಿ ವಿಹಿಂಪ,ಬಜರಂಗಳ ಕಾರ್ಯಕರ್ತರ ಜತೆ ಪಾದಯಾತ್ರೆಯಲ್ಲಿ ಆಗಮಿಸಿದ ಸೌಜನ್ಯ ತಾಯಿ ಕುಸುಮಾವತಿಯವರು ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಈ ವೇಳೆ ಅವರು ಅಣ್ನಪ್ಪನ ಮುಂದೆ ಕಣ್ಣೀರಿಟ್ಟರು. ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ನೈಜ ಆರೋಪಿಗಳ ಪತ್ತಗೆ ಪ್ರಾರ್ಥನೆ ಸಲ್ಲಿಸಿದ ಅವರು ಅಣ್ಣಪ್ಪನಿಗೆ ನಾಣ್ಯ ಹಾಕಿ ಕಾಣಿಕೆ ಸಲ್ಲಿಸಿದರು.

ವಿಹಿಂಪ ಮುಖಂಡ ಮುರಳಿ ಕೃಷ್ಣ ಹಂಸತಡ್ಕ ಸಂಘಟನೆಯ ಪರವಾಗಿ ಪ್ರಾರ್ಥಿಸಿದರು. ಸೌಜನ್ಯ ತಾಯಿ ಪ್ರಾರ್ಥನೆ ಸಲ್ಲಿಸಿದ ತಕ್ಷಣ ಸೌಜನ್ಯ ತಾಯಿ ಆರೋಪಿಸಿದವರಿಂದಲೂ ಪ್ರಾರ್ಥನೆ ನಡೆಯಿತು. ಮಲ್ಲಿಕ್ ಜೈನ್, ಉದಯ್ ಜೈನ್, ಧೀರಜ್ ಕೆಲ್ಲ ಗುಡಿ ಮುಂಭಾಗ ಪ್ರಾರ್ಥನೆ ಸಲ್ಲಿಸಿದರು. ಧರ್ಮಸ್ಥಳದಲ್ಲಿ ದುರ್ಮರಣವೊಂದು ನಡೆದಿದ್ದು, ಈ ಪ್ರಕರಣದಲ್ಲಿ ನಮ್ಮ ಯಾವುದೇ ಪಾತ್ರ ಇಲ್ಲ. ನಮ್ಮ ಹೆಸರನ್ನು ಅನಾವಶ್ಯಕ ವಾಗಿ ಎಳೆದು ತರಲಾಗಿದೆ. ನಾವು ಈ ಹಿಂದೆ ಕಾನತ್ತೂರಿಗೂ ತೆರಳಿ ಪ್ರಾರ್ಥನೆ ಮಾಡಿದ್ದೇವೆ. ನಮ್ಮ ಹೆಸರನ್ನು ಎಳೆದು ತರುವವರಿಗೆ ಶಿಕ್ಷೆಯಾಗಲಿ ಎಂದು ಪ್ರಾರ್ಥಿಸಿ ಕಾಣಿಕೆ ಸಲ್ಲಿಸಿದರು.

ಇದೇ ವೇಳೆ ಸೌಜನ್ಯ ತಾಯಿಯವರು ಆರೋಪ ಮಾಡಿರುವ ಧೀರಜ್ ಕೆಲ್ಲ, ಮಲ್ಲಿಕ್ ಜೈನ್, ಉದಯ್ ರವರು ಸಾಮಾಜಿಕ ಜಾಲತಾಣದಲ್ಲಿ ನಾವು ನಿಮ್ಮಗಾಗಿ ಅಣ್ಣಪ್ಪ ಬೆಟ್ಟದ ಬಳಿ ಕಾಯುತ್ತಿರುತ್ತೇವೆ ಎಂಬ ಸಂದೇಶ ಹಾಕಿ, ಈ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲವೆಂದು ಅಣ್ಣಪ್ಪ ಸ್ವಾಮಿಯ ಮುಂದೆ ಅಣೆ ಪ್ರಮಾಣ ಮಾಡುವುದಾಗಿ ತಿಳಿಸಿದ್ದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಟ್ಟದ ಸುತ್ತ ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದಾರೆ. ಘಟನೆಯ ಗಂಭೀರತೆಯನ್ನು ಅರಿತಿರುವ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ರಿಶ್ಯಂತ್ ದೌಡಾಯಿಸಿ ಕಾನೂನು ಸುವ್ಯವಸ್ಥೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ.

More articles

Latest article