Wednesday, October 18, 2023

ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಧ್ವಜಸ್ತಂಭ ಸ್ವೀಕಾರ ಹಾಗೂ ದೇವಸ್ಥಾನದ ವೆಬ್‌ಸೈಟ್ ಅನಾವರಣ ಸಮಾರಂಭ

Must read

ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ದಾರು ಶಿಲ್ಪಿಗಳಿಂದ ಧ್ವಜಸ್ತಂಭ(ಕೊಡಿಮರ) ಸ್ವೀಕಾರ ಹಾಗೂ ದೇವಸ್ಥಾನದ ವೆಬ್‌ಸೈಟ್ ಅನಾವರಣ ಸಮಾರಂಭವು ಆ. ೨೦ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.

ಬ್ರಹ್ಮಕಲಶ ಸಿದ್ಧತೆಗೆ ಸರಪಾಡಿ-ಮಣಿನಾಲ್ಕೂರು ಗ್ರಾಮಗಳ ಭಕ್ತರ ಪರವಾಗಿ ಸಮಿತಿಗೆ ವೀಳ್ಯ ಹಸ್ತಾಂತರಿಸಿದ ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಮಾತನಾಡಿ, ನೇತ್ರಾವತಿ ನದಿ ಹಾಗೂ ಬೆಟ್ಟಗುಡ್ಡಗಳ ಮಧ್ಯೆ ಋಷಿ ಮುನಿಗಳ ಪ್ರತಿಷ್ಠಾಪನೆಗೊಂಡ ಸರಪಾಡಿ ದೇವಸ್ಥಾನವು ಪುರಾಣ ಪ್ರಸಿದ್ಧಿ ಕ್ಷೇತ್ರವೆನ್ನಲು ಯಾವುದೇ ಸಂಶಯವಿಲ್ಲ. ಶಿವ ಹಾಗೂ ದೇವಿ ಸಾನಿಧ್ಯಗಳಿಗೆ ಭೇಟಿ ನೀಡುವುದೇ ನಮ್ಮ ಭಾಗ್ಯವಾಗಿದ್ದು, ಸರಪಾಡಿ ಭೇಟಿ ನೀಡಿದಾಗ ಕೈಲಾಸ ಬಂದ ಅನುಭವವಾಗಿದೆ. ಕ್ಷೇತ್ರದಲ್ಲಿ ಸಿಕ್ಕಿದ ಸತ್ಕಾರಕ್ಕೆ ಧನ್ಯನಾಗಿದ್ದು, ನಿಮ್ಮ ಜತೆ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗಿಯಾಗಿ ಸಹಕಾರ ನೀಡುತ್ತೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಎಸ್.ಶೆಟ್ಟಿ ಸರಪಾಡಿ ಅವರು ಬ್ರಹ್ಮಕಲಶೋತ್ಸವದ ಅಧ್ಯಕ್ಷರಾಗಿ ಮಹಾದಾನಿ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರ ಹೆಸರನ್ನು ಘೋಷಣೆ ಮಾಡಿದರು. ಮುಖ್ಯಅತಿಥಿಗಳಾದ ಪುತ್ತೂರಿನ ಮೂಕಾಂಬಿಕಾ ಗ್ಯಾಸ್ ಏಜೆನ್ಸೀಸ್ ಮಾಲಕ ಸಂಜೀವ ಆಳ್ವ ಪಡ್ಡಾಯಿಬೆಟ್ಟು, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ಉಪಾಧ್ಯಕ್ಷ ಭುವನೇಶ್ ಪಚ್ಚಿನಡ್ಕ ಅವರು ಜೀರ್ಣೋದ್ಧಾರ ಕಾರ್ಯಕ್ಕೆ ಸಹಕಾರ ನೀಡುವ ಭರವಸೆ ನೀಡಿದರು.

ಸಮಿತಿಯ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಪ್ರಸ್ತಾವನೆಗೈದರು. ಆರ್ಥಿಕ ಸಮಿತಿ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ರಾಧಾಕೃಷ್ಣ ರೈ ಕೊಟ್ಟುಂಜ ವಂದಿಸಿದರು. ಪ್ರಜ್ವಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಪ್ರಾರಂಭದಲ್ಲಿ ಅಜಿಲಮೊಗರು ಯಕ್ಷಚಿಗುರು ಕಲಾತಂಡದಿಂದ ಶ್ರೀಕೃಷ್ಣ ಲೀಲೆ ಯಕ್ಷಗಾನ ಪ್ರದರ್ಶನಗೊಂಡಿತು. ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಹಾಗೂ ಪುರೋಹಿತ ವಿಜಯಕೃಷ್ಣ ಐತಾಳ್ ಪೌರೋಹಿತ್ಯದಲ್ಲಿ ದಾರುಶಿಲ್ಪಿ ಹರೀಶ್ ಆಚಾರ್ಯ ಬೋಳಿಯಾರು ಅವರಿಂದ ಧ್ವಜಸ್ತಂಭ ಸ್ವೀಕರಿಸಲಾಯಿತು.

More articles

Latest article