Friday, October 20, 2023

ಪಡಿತರ ಚೀಟಿದಾರರೇ ಗಮನಿಸಿ..: ಆ.31ರೊಳಗೆ `ಇ-ಕೆವೈಸಿ’ ಮಾಡಿಸದಿದ್ದರೆ ಪಡಿತರ ಚೀಟಿಯಲ್ಲಿನ ಸದಸ್ಯತ್ವ ಅಮಾನತು

Must read

ಪುತ್ತೂರು: ಪಡಿತರ ಚೀಟಿ ಹೊಂದಿರುವ ರಾಜ್ಯದ ಎಲ್ಲಾ ಫಲಾನುಭವಿಗಳು ಇ-ಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಇಲ್ಲಿಯವರೆಗೆ ಇ-ಕೆವೈಸಿ ಮಾಡಿಕೊಳ್ಳದಿರುವವರು 31 ಆಗಸ್ಟ್ 2023ರ ಒಳಗಾಗಿ ಮಾಡಿಸಬೇಕು ಇಲ್ಲವಾದಲ್ಲಿ ನಿಮ್ಮ ರೇಷನ್ ಕಾರ್ಡ ರದ್ದುಗೊಳ್ಳಲಿದ್ದು, ಅನೇಕ ಫಲಾನುಭವಿಗಳು ಸವಲತ್ತಿನಿಂದ ವಂಚಿತರಾಗಲಿದ್ದಾರೆ.

ಪಡಿತರ ವ್ಯವಸ್ಥೆಯಲ್ಲಿ ನೀಡುವ ಆಹಾರ ಸಾಮಗ್ರಿಗಳ ನಿರ್ದಿಷ್ಟ ಮಾಹಿತಿ ಹಾಗೂ ಕುಟುಂಬ ಸದಸ್ಯರ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರಕಾರ ವರ್ಷಗಳ ಹಿಂದೆಯೇ ಇ-ಕೆವೈಸಿ ಆರಂಭಿಸಿತ್ತು. ಹಲವು ಬಾರಿ ಅವಕಾಶ ನೀಡಿದ್ದರೂ ಶೇ. 100 ಪ್ರಗತಿ ಸಾಧ್ಯವಾಗಿಲ್ಲ. ಹೀಗಾಗಿ ಇ ಕೆವೈಸಿ ಮಾಡಲು ಬಾಕಿ ಇರುವವರಿಗೆ ಆ. 31ರ ಕೊನೆಯ ಗಡುವು ನೀಡಲಾಗಿದೆ. ಒಂದು ವೇಳೆ ಮಾಡಿಸದಿದ್ದಲ್ಲಿ ಅಂತಹ ಸದಸ್ಯರನ್ನು ಪಡಿತರ ಚೀಟಿಯಿಂದ ಅಮಾನತುಗೊಳಿಸುವ ಜತೆಗೆ ಫಲಾನುಭವಿಗಳಿಗೆ ಆಹಾರಧಾನ್ಯ ಮತ್ತು ಡಿಬಿಟಿ ನಗದು ಸೌಲಭ್ಯವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಪಡಿತರ ಚೀಟಿಯಲ್ಲಿ ಹೆಸರಿಲ್ಲದಿದ್ದರೆ ಪಡಿತರ ಸಾಮಗ್ರಿ ಮಾತ್ರವಲ್ಲದೆ ಸರಕಾರದ ಅನೇಕ ಸವಲತ್ತುಗಳನ್ನು ಪಡೆಯಲು ಕೂಡ ತೊಂದರೆ ಉಂಟಾಗಲಿದೆ.

ದ.ಕ. ಜಿಲ್ಲೆಯಲ್ಲಿ 2,55,605 ಪಡಿತರ ಚೀಟಿಗಳಿದ್ದು, 10,15,841 ಸದಸ್ಯರಿದ್ದಾರೆ. ಇದರಲ್ಲಿ 2,36,273 ಲಕ್ಷ ಕಾರ್ಡ್‌ಗಳಲ್ಲಿನ 9,87,224 ಸದಸ್ಯರು ಇ-ಕೆವೈಸಿ ಪೂರ್ಣಗೊಳಿಸಿಕೊಂಡಿದ್ದಾರೆ. 22,659 ಕಾರ್ಡ್‌ಗಳಲ್ಲಿ 34,276 ಮಂದಿ ಸದಸ್ಯರು ಇ-ಕೆವೈಸಿ ಮಾಡಿಲ್ಲ. ಉಡುಪಿ ಜಿಲ್ಲೆಗೆ ಸಂಬಂಧಿಸಿ 22,944 ಕಾರ್ಡ್‌ಗಳಲ್ಲಿನ 32,235 ಸದಸ್ಯರ ಇ-ಕೆವೈಸಿ ಆಗಿಲ್ಲ.

ಇ-ಕೆವೈಸಿ ಬಾಕಿ ಇರುವವರ ಪಟ್ಟಿಯಲ್ಲಿ ಬೆಳ್ತಂಗಡಿ ಪ್ರಥಮ ಸ್ಥಾನದಲ್ಲಿದೆ. 4,139 ಕಾರ್ಡುದಾರರ ಪೈಕಿ 6,031 ಸದಸ್ಯರು, ಬಂಟ್ವಾಳದಲ್ಲಿ 5,386 ಕಾರ್ಡ್‌ದಾರರ ಪೈಕಿ 7,861, ಮಂಗಳೂರಿನಲ್ಲಿ 2,454 ಕಾರ್ಡ್‌ದಾರರ ಪೈಕಿ 3,592, ಪುತ್ತೂರಿನಲ್ಲಿ 2,803 ಕಾರ್ಡ್‌ದಾರರ ಪೈಕಿ 4,772, ಸುಳ್ಯದಲ್ಲಿ 304 ಕಾರ್ಡ್‌ದಾರರ ಪೈಕಿ 391, ಮೂಡಬಿದಿರೆಯಲ್ಲಿ 2,377 ಕಾರ್ಡ್‌ದಾರರ ಪೈಕಿ 3778, ಕಡಬದಲ್ಲಿ 2198 ಕಾರ್ಡ್‌ದಾರರ ಪೈಕಿ 3,638, ಮೂಲ್ಕಿಯಲ್ಲಿ 1,176 ಕಾರ್ಡ್‌ದಾರರ ಪೈಕಿ 1,645, ಉಳ್ಳಾಲದಲ್ಲಿ 1,822 ಕಾರ್ಡ್‌ದಾರರ ಪೈಕಿ 2,568 ಸದಸ್ಯರ ಇ-ಕೆವೈಸಿಗೆ ಬಾಕಿ ಇದೆ.

More articles

Latest article