Thursday, October 26, 2023

ಯುವತಿಯ ಕತ್ತು ಸೀಳಿ ಕೊಲೆ ಪ್ರಕರಣ ; ಮೃತಳ ಮನೆಗೆ ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

Must read

ಪುತ್ತೂರು: ಯುವತಿಯ ಕತ್ತು ಸೀಳಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕುದ್ದುಪದವಿನಲ್ಲಿರುವ ಮೃತ ಯುವತಿಯ ಮನೆಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ ಭೇಟಿ ನೀಡಿದ್ದಾರೆ.

ಭಗವಂತ ಖೂಬಾಗೆ ಬಿಜೆಪಿ ರಾಜ್ಯಾಧ್ಯಕ್ಷ, ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದ್ದು, ಮೃತ ಗೌರಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಈ ವೇಳೆ ಬಿಜೆಪಿ ಮುಖಂಡರಾದ ಪದ್ಮನಾಭ ಕೊಟ್ಟಾರಿ, ಮಾಜಿ ಶಾಸಕ ಸಂಜೀವ ಮಠಂದೂರು, ಹರಿಪ್ರಸಾದ್ ಯಾದವ್, ಸಾಜಾ ರಾಧಕೃಷ್ಣ ಆಳ್ವ, ರಾಜೇಶ್ ಬಾಳೆಕಲ್ಲು ಸಹಿತ ಹಲವರು ಉಪಸ್ಥಿತರಿದ್ದರು.

ಪುತ್ತೂರಿನಲ್ಲಿ ನಗರದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಗೌರಿ ಎಂಬ ಯುವತಿ ನಿನ್ನೆ ಎಂದಿನಂತೆ ಕೆಲಸಕ್ಕೆಂದು ಬಂದಿದ್ದಳು. ಈ ನಡುವೆ ಈಕೆಯನ್ನು ನಗರದ ಬಸ್ ನಿಲ್ದಾಣದ ಬಳಿ ನಾಲ್ಕು ವರ್ಷದಿಂದ ಪರಿಚಿತನಾಗಿರುವ ಪದ್ಮರಾಜ್ ಎಂಬ ಯುವಕ ಭೇಟಿಯಾಗಿದ್ದ. ಆದ್ರೆ, ಇತ್ತೀಚೆಗೆ ಇವರಿಬ್ಬರ ನಡುವೆ ಗಲಾಟೆಗಳು ನಡೆಯುತಿತ್ತು. ಈ ವಿಚಾರದಲ್ಲಿ ವಿಟ್ಲ ಪೊಲೀಸ್ ಠಾಣೆಯ ಮೆಟ್ಟಿಲೇರಲಾಗಿತ್ತು. ಆದ್ರೆ, ನಿನ್ನೆ ಮತ್ತೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಹೀಗಾಗಿ ಯುವತಿ ಈ ಬಗ್ಗೆ ದೂರು ನೀಡಲೆಂದು ಪುತ್ತೂರು ಮಹಿಳಾ ಠಾಣೆ ಬಳಿ ಬಂದಿದ್ದಾಳೆ. ಆದ್ರೆ, ಈಕೆಯನ್ನು ಬೆನ್ನತ್ತಿ ಬಂದ ಆರೋಪಿ ಪದ್ಮರಾಜ್ ಠಾಣೆಯ ಹೊರ ಭಾಗದಲ್ಲೇ ಚೂರಿಯಿಂದ ಗೌರಿಯ ಕುತ್ತಿಗೆಯ ಭಾಗಕ್ಕೆ ನಾಲ್ಕು ಬಾರಿ ಇರಿದು ಬೈಕ್ ಅಲ್ಲೇ ಬಿಟ್ಟು ಪರಾರಿಯಾಗಿದ್ದ. ವಿಚಾರ ತಿಳಿದ ಸ್ಥಳೀಯರು ಗಂಭೀರ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ಸೇರಿಸಿದ್ರು ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಳು.

ಘಟನೆ ನಡೆಯುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಪೊಲೀಸರು ಬೈಕ್‌ನ ಆಧಾರದಲ್ಲಿ ಆರೋಪಿಯ ಪೂರ್ವಪರ ವಿಚಾರಿಸಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಿಷ್ಯಂತ್ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

More articles

Latest article