Thursday, October 26, 2023

ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ಶ್ರೀ ಗುರುದೇವಾನಂದ ಸ್ವಾಮಿಗಳವರ ಜನ್ಮ ದಿನೋತ್ಸವ

Must read

ವಿಟ್ಲ: ನಮ್ಮ ಅಂತರಂಗದೊಳಗಿನ ಕಾಮ, ಕ್ರೋಧ, ಲೋಭವನ್ನು ಗೆದ್ದಾಗ ಮಾತ್ರ ಆತ್ಮತೃಪ್ತಿಯನ್ನು ಪಡೆಯಬಹುದು. ದಾನ ಮಾಡಿದ ಧನದ ಮೌಲ್ಯ ಹೆಚ್ಚಾಗುವುದು. ನಮ್ಮೊಳಗೆ ನಾವೇ ಇಣುಕಿ ನೋಡಿದಾಗ ನಮ್ಮತನದ ಅನುಭವವೇದ್ಯವಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳು ನುಡಿದರು.

ಅವರು ಮಂಗಳವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ವತಿಯಿಂದ ನಡೆದ ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ, ಗ್ರಾಮೋತ್ಸವ 2023 ಗುರುವಂದನ-ಸೇವಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸಾಧುಸಂತರುಗಳಿಗೆ ಎಂದೂ ಸಹ ಹುಟ್ಟುಹಬ್ಬದ ಸಂಭ್ರಮದ ಅವಶ್ಯಕತೆ ಇಲ್ಲ. ಆದರೆ ಯಾವುದೇ ಕಾರ್ಯವನ್ನು ಸೇವೆ ಹಾಗೂ ಲೋಕ ಕಲ್ಯಾಣದ ಉದ್ದೇಶದಿಂದ ಮಾಡುತ್ತಾರೆ. ದುಂದುವೆಚ್ಚದ ಅದ್ದೂರಿಯ ಹುಟ್ಟು ಹಬ್ಬ ಸೇವಾ ರೂಪದಲ್ಲಿ ಅರ್ಥಪೂರ್ಣವಾಗಿ ನಡೆಸುವಂತೆ ತಿಳಿಸಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಯು. ಮಾತನಾಡಿ ಒಡಿಯೂರು ಕ್ಷೇತ್ರ ಧಾರ್ಮಿಕ ಕ್ಷೇತ್ರದೊಂದಿಗೆ ಸಾಮಾಜಿಕ ಪರಿವರ್ತನೆಗೆ ಹೆಚ್ಚು ಒತ್ತು ನೀಡಿದೆ. ಕ್ಷೇತ್ರದ ಅಭಿವೃದ್ಧಿಗೆ ಸರಕಾರದ ಕಡೆಯಿಂದ ಪೂರಕ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಸಮಾರಂಭದಲ್ಲಿ ಶ್ರೀ ಸಂಸ್ಥಾನದಿಂದ ಸಾಧಕರಿಗೆ ವಿಶೇಷ ಗೌರವ ಪುರಸ್ಕಾರ ನೀಡಲಾಯಿತು.

ಮುಂಬಯಿ ಹೇರಂಬ ಕೆಮಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರಿಗೆ ದಾನ ಸಿರಿ, ಮೂಡಬಿದರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರಿಗೆ ವಿದ್ಯಾ ಸಿರಿ, ಸಂಗೀತ ನಿರ್ದೇಶಕ ಶಂಕರ ಶ್ಯಾನುಭೋಗ್ ಅವರಿಗೆ ಗಾನ ಸಿರಿ, ಬರೋಡ ಶಶಿ ಕ್ಯಾಟರಿಂಗ್ ಸರ್ವಿಸಸ್ ಸ್ಥಾಪಕ ಶಶಿಧರ ಬಿ. ಶೆಟ್ಟಿ ಬರೋಡ ಅವರಿಗೆ ಸೇವಾ ಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಮುಂಬಯಿ ಸಮಿತಿ ಅಧ್ಯಕ್ಷ ವಾಮಯ್ಯ ಬಿ. ಶೆಟ್ಟಿ, ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಲೋಕನಾಥ ಜಿ. ಶೆಟ್ಟಿ, ಕೋಶಾಧಿಕಾರಿಗಳಾದ ಎ. ಸುರೇಶ್ ರೈ, ಎ. ಅಶೋಕ್ ಕುಮಾರ್, ಒಡಿಯೂರು ಶ್ರೀ ವಜ್ರ ಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ ಉಪಸ್ಥಿತರಿದ್ದರು.

ಜನ್ಮದಿನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ವಂದಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಒಡಿಯೂರು ಶ್ರೀಗಳ ಜನ್ಮದಿನೋತ್ಸವದ ಅಂಗವಾಗಿ ಗುರುಬಂಧುಗಳಿಂದ ಗುರುವಂದನೆ, ವಜ್ರಮಾತಾ ಮಹಿಳಾ ಬಂಧುಗಳಿಂದ ಉಯ್ಯಾಲೆ ಸೇವೆ ನಡೆಯಿತು.

ಅನಾರೋಗ್ಯ ಪೀಡಿತರ ಚಿಕಿತ್ಸೆಗೆ, ಮನೆ ನಿರ್ಮಾಣಕ್ಕೆ ಸಹಾಯಹಸ್ತ, ಧಾರ್ಮಿಕ ಕೇಂದ್ರದ ಅಭಿವೃದ್ಧಿಗೆ ಸಹಾಯಹಸ್ತ, ಮರಣ ಸಾಂತ್ವನ, ಉಚಿತ ಕನ್ನಡಕ ವಿತರಣೆ, ವಿದ್ಯಾರ್ಥಿ ವೇತನ ನೀಡಲಾಯಿತು.

More articles

Latest article