Saturday, October 28, 2023

ಶಿಷ್ಟಾಚಾರ ಉಲ್ಲಂಘನೆ ಆರೋಪ : ಅಧಿಕಾರಿಗಳ ಅಮಾನತು ರದ್ದುಪಡಿಸಿದ ಸರಕಾರ

Must read

ಮೂಡುಬಿದಿರೆ: ಇರುವೈಲು ಗ್ರಾಮ ಪಂಚಾಯತ್‌ನ ನೂತನ ಕಟ್ಟಡದ ಉದ್ಘಾಟನೆಯ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಯಾಗಿದೆ ಎಂಬ ಆರೋಪಕ್ಕೊಳಗಾಗಿ ಅಮಾನತು ಗೊಂಡಿದ್ದ ಮೂಡುಬಿದಿರೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ದಯಾವತಿ ಮತ್ತು ಇರುವೈಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕಾಂತಪ್ಪ ಅವರ ಅಮಾನತು ಆದೇಶವನ್ನು ಸರಕಾರ ರದ್ದುಪಡಿಸಿದೆ.

ಮೊದಲಿಗೆ ಕಾರ್ಯಕ್ರಮ ಮುಂದೂಡಲು ಮೇಲಧಿಕಾರಿಗಳು ಸೂಚಿಸಿದ್ದರೆ ಬಳಿಕ ಹಠಾತ್ತಾಗಿ ಅಮಾನತು ಆದೇಶವನ್ನು ಜಿ.ಪಂ. ಸಿಇಒ ಆನಂದ್‌ ಹೊರಡಿಸಿದ್ದರು. ಅದರಂತೆ ಸಮಾರಂಭ ರದ್ದಾಗಿತ್ತು. ಇದರ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ “ಜಿಲ್ಲಾಧಿಕಾರಿಗಳ ಕಚೇರಿ ನೀಡಿದ ಶಿಷ್ಟಾಚಾರ ಪಟ್ಟಿಯನ್ನೇ ಅನುಸರಿಸಿ ಆಮಂತ್ರಣ ಮುದ್ರಿಸಿದ್ದರೂ ಸಮಾರಂಭ ರದ್ದು ಮತ್ತು ಅಮಾನತು ಆದೇಶ ಹೊರಡಿಸಿದ್ದಕ್ಕೆ ತನ್ನ ಪ್ರತಿರೋಧ ವ್ಯಕ್ತಪಡಿಸಿದ ಶಾಸಕ ಉಮಾನಾಥ ಕೋಟ್ಯಾನ್‌ ಆ. 8ರಂದು ಕಟ್ಟಡವನ್ನು ಉದ್ಘಾಟಿಸಿದ್ದರು.

ಈ ಅಮಾನತು ಪ್ರಕರಣದಿಂದಾಗಿ ನಮ್ಮ ಹಕ್ಕು ಚ್ಯುತಿಯಾಗುತ್ತಿದೆ ಎಂದು ಆರೋಪಿಸಿ ಜಿಲ್ಲೆಯ ಶಾಸಕರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಆದೇಶವನ್ನು ರದ್ದುಪಡಿಸದಿದ್ದಲ್ಲಿ ಮಂಗಳವಾರದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಎಚ್ಚರಿಕೆ ನೀಡಿದ್ದರು.

ಅಮಾನತು ಹಿಂಪಡೆದ ಸರಕಾರ ಈ ಇಬ್ಬರಿಗೆ ಮುಂದಿನ ಕರ್ತವ್ಯದ ನೆಲೆ ಎಲ್ಲಿ ಎಂಬುದನ್ನು ಸೂಚಿಸಿಲ್ಲ ಎಂದು ತಿಳಿದುಬಂದಿದೆ.

More articles

Latest article