Tuesday, October 17, 2023

ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಬೆಳ್ಳಿಹಬ್ಬ ಮಹೋತ್ಸವ

Must read

ವಿಟ್ಲ: ಸಂಸ್ಕೃತಿ, ಸಂಸ್ಕಾರ ಹಳ್ಳಿಗಳಲ್ಲಿ ಉಳಿದು ಬೆಳೆಯುತ್ತಿದೆ. ಹೆಣ್ಣು ಮನೆಗೆ ಲಕ್ಷ್ಮಿ ಮಾತ್ರವಲ್ಲ ಗುರುವೂ ಆಗಿದ್ದಾಳೆ. ಎಲ್ಲರೂ ಶ್ರಮ ಪಟ್ಟಾಗ ಆಶ್ರಮವಾಗುತ್ತದೆ. ದೇವರು ಮುಗ್ಧತೆಯಲ್ಲಿ ಸ್ಥಿತರಾಗಿದ್ದಾರೆ. ಜ್ಞಾನ ಕ್ಕೆ ಜಾತಿ,ಶಾಸ್ತ್ರದ ಅಭ್ಯಂತರವಿಲ್ಲ. ಪ್ರಪಂಚವನ್ನು ಅರಿತಾಗ ಗುರುತತ್ವ ಸಾಕ್ಷಾತ್ಕಾರವಾಗುತ್ತದೆ. ಮಾತೆಯರು ಹಿಂದೂ ಶಾಸ್ತ್ರಗಳ ಬಗ್ಗೆ ಅರಿಯುವ ಅವಶ್ಯಕತೆಯಿದೆ. ಪ್ರಕೃತಿ,ಹೆತ್ತ ಮಾತೆ, ಗೋಮಾತೆ ನಾಶವಾದರೆ ಲೋಕ ವಿನಾಶಕ್ಕೆ ನಾಂದಿಯಾಗುವುದು ಎಂದು ಗೌರಿಗದ್ದೆ ಸ್ವರ್ಣ ಪೀಠಿಕಾವುರದ ಅವಧೂತ ಶ್ರೀ ವಿನಯ ಗುರೂಜಿ ಹೇಳಿದರು.

ಅವರು ಭಾನುವಾರ ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಬೆಳ್ಳಿಹಬ್ಬ ಮಹೋತ್ಸವದ ವರಮಹಾಲಕ್ಷ್ಮೀ ವ್ರತಾಚರಣೆ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ವರಮಹಾಲಕ್ಷ್ಮಿ ವ್ರತ ಸಂಬಂಧ ಬೆಸೆಯುವ ಹಬ್ಬ. ಭಾವನೆಯಿಂದ ಕೂಡಿದ ರಥ ಭಾರತವಾಗಿದ್ದು, ಸನಾತನ ಧರ್ಮದ ರಕ್ಷಣೆಯ ಭಾವವನ್ನು ಎಲ್ಲರೂ ಹೊಂದಿದ್ದಾರೆ. ಸನಾತನ ಧರ್ಮವನ್ನು ನಾವೇ ಹಾಳುಮಾಡುತ್ತಿದ್ದು, ಹಬ್ಬಗಳ ಆಚರಣೆಯಿಂದ ಸಂಘಟನೆ ಬಲವಾಗುತ್ತದೆ ಎಂದರು.

ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಆಹಾರದಲ್ಲಿ ಸತ್ವ ಕಡಿಮೆಯಾಗಿ ದೇಹದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಯುವ ಪೀಳಿಗೆಯಲ್ಲಿ ಸಂಸ್ಕಾರವನ್ನು ತುಂಬುವ ಕಾರ್ಯ ಧಾರ್ಮಿಕ ಕೇಂದ್ರಗಳ ಮೂಲಕ ನಡೆಯಬೇಕು. ಮಾದಕ ದ್ರವ್ಯಗಳು ದೇಶದ ಅಸ್ತಿತ್ವದ ಮೇಲೆ ಪ್ರಭಾವವನ್ನು ಬೀರುತ್ತಿದೆ. ಪ್ರತಿಯೊಬ್ಬರು ಮಾನಸಿಕವಾಗಿ ಸದೃಢರಾದಾಗ ಸಮಾಜದಲ್ಲಿ ಬದಲಾವಣೆಯನ್ನು ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ ಮಾಣಿಲಶ್ರೀಯವರು ಅಶಕ್ತರಿಗೆ ನೀಡಿದ ಕೊಡುಗೆ, ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯದ ಮೂಲಕ ಸಮಾಜಕ್ಕೆ ಪ್ರೀತಿಯನ್ನು ನೀಡಿದ್ದಾರೆ. ಸಂಪತ್ತಿಗಿಂತ ಪ್ರೀತಿಯನ್ನು ಸಮಾಜಕ್ಕೆ ನೀಡುವ ಕಾರ್ಯವಾಗಬೇಕು. ಜನರ ಅಗತ್ಯಗಳಿಗೆ ಬೇಕಾದ ವಿಚಾರಗಳನ್ನು ನೀಡುವ ಕಾರ್ಯ ಕ್ಷೇತ್ರಗಳಲ್ಲಿ ನಡೆಯಬೇಕಾಗಿದೆ. ಸೇವೆ ತ್ಯಾಗವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಬದುಕು ನಡೆಸಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಿಹಬ್ಬ ಸಮಿತಿ ಗೌರವಾಧ್ಯಕ್ಷ ಕೆ. ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ವಹಿಸಿದ್ದರು. ಚಿಕ್ಕಮಗಳೂರು ಕಳಸ ಶ್ರೀ ಸತ್ಯ ಶನೀಶ್ವರ ಕ್ಷೇತ್ರದ ಶ್ರೀ ಚಿದಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ‘ಮಾಣಿಲವಾಯ್ತು ವೈಕುಂಠ’ ಕನ್ನಡ ಭಕ್ತಿ ಗೀತೆಯ ಧ್ವನಿ ಸುರುಳಿಬಿಡುಗಡೆ ನಡೆಯಿತು.

ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಲೋಟಸ್ ಪ್ರಾಪರ್ಟೀಸ್ ಆಡಳಿತ ಪಾಲುದಾರ ಜಿತೇಂದ್ರ ಎಸ್. ಕೊಟ್ಟಾರಿ, ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ರಘು ಎ. ಮೂಲ್ಯ ಪಾದೆಬೆಟ್ಟು, ಪುತ್ತೂರಿನ ವೈದ್ಯ ಡಾ. ಸುರೇಶ್ ಪುತ್ತೂರಾಯ, ಉಮೇಶ್ ಪೂಂಜ, ವಿಠಲ ತಣ್ಣೀರು ತೋಟ, ಪುರುಷೋತ್ತಮ ಚೇಂಡ್ಲ, ಜಗದೀಶ್ ಶೇಣವ, ಪ್ರಸಾದ್ ಪಾಂಗಣ್ಣಾಯ, ರೇವತಿ ಪೆರ್ನೆ, ವನಿತಾ ವಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಟ್ರಸ್ಟಿ ತಾರಾನಾಥ ಟಿ. ಸ್ವಾಗತಿಸಿದರು. ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿದರು. ಎಚ್. ಕೆ. ನಯನಾಡು, ವಾರುಣಿ ನಾಗರಾಜ ಆಚಾರ್ಯ ಮಂಗಳದೇವಿ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದಲ್ಲಿ ಉದ್ಯಮ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಿದ ಉದ್ಯಮಿ ಕೆ. ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಕ್ಷೇತ್ರದ ಡಾ. ಎಂ. ಬಿ. ಪುರಾಣಿಕ್, ಧಾರ್ಮಿಕ ಕ್ಷೇತ್ರದ ಮೋನಪ್ಪ ಭಂಡಾರಿ, ಉದ್ಯಮ ಕ್ಷೇತ್ರದ ಸುನೀಲ್ ಆರ್. ಸಾಲ್ಯಾನ್, ಉದ್ಯಮ ಕ್ಷೇತ್ರದ ಭಾಸ್ಕರ್ ಶೆಟ್ಟಿ ಪುಣೆ, ವೈದ್ಯಕೀಯ ಕ್ಷೇತ್ರದ ಡಾ. ನರಸಿಂಹ ಶಾಸ್ತ್ರಿ, ಸಾಮಾಜಿಕ ಕ್ಷೇತ್ರದ ಟಿ. ತಾರಾನಾಥ ಕೊಟ್ಟಾರಿ, ಉದ್ಯಮ ಕ್ಷೇತ್ರದ ದಿವಾಕರ್ ಮೂಲ್ಯ ಬೆಂಗಳೂರು ಅವರನ್ನು ಸನ್ಮಾನಿಸಲಾಯಿತು.

ಪ್ರಾತಃಕಾಲ ತ್ರಿಕಾಲ ಪೂಜೆ ಪ್ರಾರಂಭ, ಆದಿತ್ಯಾ ಹೃದಯ ಹೋಮ, ಕನಕಧಾರ ಯಾಗ, ಚಕ್ರಾಬ್ಧಿ ಪೂಜೆ, ಸಹಸ್ರನಾಮ ತುಳಸಿ ಅರ್ಚನೆ, ಸಾಯಂಕಾಲ ಪಂಚದುರ್ಗಾ ಹೋಮ, ಪಂಚದುರ್ಗಾ ಪೂಜೆ, ಮಹಾ ಪೂಜೆ, ಪ್ರಸಾದ ವಿತರಣೆ ನಡೆಯಿತು. ಕಡೇಶಿವಾಲಯ ಶ್ರೀ ಚಿಂತಾಮಣಿ ಡ್ಯಾನ್ಸ್ ಗ್ರೂಪ್ ಅವರಿಂದ ನೃತ್ಯ ವೈಭವ, ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಶ್ರೀ ಬಪ್ಪನಾಡು ಕ್ಷೇತ್ರಮಹಾತ್ಮೆ ಬಯಲಾಟ ನಡೆಯಿತು.

More articles

Latest article