Thursday, October 19, 2023

ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತಾಚರಣೆಯ ಬೆಳ್ಳಿಹಬ್ಬ ಮಹೋತ್ಸವ

Must read

ವಿಟ್ಲ: ತ್ಯಾಗ ಮತ್ತು ಸೇವೆ ಭಾರತದ ಅಂತಸತ್ವವಾಗಿದ್ದು, ಅಧ್ಯಾತ್ಮದ ವಿಚಾರದಿಂದಾಗಿ ವಿಶ್ವ ಇತ್ತ ನೋಡುತ್ತಿದೆ. ಧರ್ಮವನ್ನು ಮರೆತ ರಾಷ್ಟ್ರ ಹಾಗೂ ವ್ಯಕ್ತಿಗೆ ಅಪಾಯ ನಿಶ್ಚಿತವಾಗಿದೆ. ವಿಜ್ಞಾನಿಗಳಲ್ಲಿ ಧರ್ಮ ಶ್ರದ್ಧೆಯಿದ್ದಾಗ ಅವರ ಗುರಿ ಸಾಧನೆ ಯಶಸ್ವಿಯಾಗುವುದು. ಶ್ರದ್ಧೆ, ಪರಿಶ್ರಮದಿಂದ ತುಂಬಿದ ಬದುಕಿನಲ್ಲಿ ಮಂಥನ ಆದಾಗ ಲಕ್ಷ್ಮಿ ತನ್ನಿಂತಾನೇ ಉದಯಿಸುತ್ತದೆ. ಅರ್ಪಣಾ ಭಾವದ ಮನಸ್ಸುಗಳಿದ್ದಾಗ ಕ್ಷೇತ್ರದ ಬೆಳವಣಿಗೆಯಾಗುತ್ತದೆ. ತಾಳ್ಮೆ ಸಹನೆಯಿದ್ದಾಗ ಬದುಕು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಶುಕ್ರವಾರ ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತಾಚರಣೆಯ ಬೆಳ್ಳಿಹಬ್ಬ ಮಹೋತ್ಸವದ ವಿಶೇಷ ಸಂಭ್ರಮದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.

ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಸಮಾಜ ಮತ್ತು ಸಂತರ ನಡುವೆ ಅವಿನಾಭಾವ ಸಂಬಂಧವಿದೆ. ಹಿಂದು ಸಮಾಜದಲ್ಲಿ ಐಕ್ಯತೆಯ ಅಗತ್ಯವಿದ್ದು, ದೇಶದ ಆಚಾರವಿಚಾರಗಳನ್ನು ಯುವ ಪೀಳಿಗೆಗೆ ಧಾರೆಯೆರೆಯುವ ಕಾರ್ಯ ನಡೆಯಬೇಕು. ವರಮಹಾಲಕ್ಷ್ಮೀ ವ್ರತಾಚರಣೆಯ ಮೂಲಕ ಸುಸಂಸ್ಕೃತವಾಗಿಸುವ ಸಮಾಜ ನಿರ್ಮಾಣದ ಕಲ್ಪನೆಯನ್ನು ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

ಸಮಾರಂಭವನ್ನು ಉದ್ಘಾಟಿಸಿದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ್ ಖೂಬ ಮಾತನಾಡಿ ಧರ್ಮಾಧಾರಿತ ಆಡಳಿತದಿಂದ ದೇಶಕ್ಕೆ ಸುಭಿಕ್ಷೆ ಸಿಗುತ್ತದೆ. ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಮಾಣಿಲದ ಪೂಜ್ಯರ ಕಾರ್ಯ ಹೆಮ್ಮೆತರುವಂತದ್ದಾಗಿದೆ. ಭಾರತದ ಸಂಸ್ಕೃತಿ, ಸಂಸ್ಕಾರವನ್ನು ಉಳಿಸುವ ವಿಜ್ಞಾನದ ಅಗತ್ಯವಿದೆ. ದೇಶದ ಪರಂಪರೆಯ ಮಾಹಿತಿಯನ್ನು ಮುಂದಿನ ಪೀಳಿಗೆಗೆ ನೀಡುವ ಕಾರ್ಯ ನಡೆಯಬೇಕು.ಧರ್ಮ ಪ್ರಜ್ಞೆಯಿಂದ ನಡೆಸುವ ಕಾರ್ಯಕ್ಕೆ ಭಗವಂತನ ಅನುಗ್ರಹವಿರುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸೌಂದರ್ಯ ರಮೇಶ್, ಸತೀಶ್ ಶೆಟ್ಟಿ ಪಟ್ಲ, ಕೊರಗಪ್ಪ ಪೂಜಾರಿ ಬಾಳೆಕಲ್ಲು, ಸಿ.ಎ.ಸುಧೀರ್ ಶೆಟ್ಟಿ ಎಣ್ಮಕಜೆ, ಗಣೇಶ್ ಕುಲಾಲ್, ದೇವಪ್ಪ ಕುಲಾಲ್ ಪಂಜಿಕಲ್ಲು, ಯಾದವ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಜೆ.ಪಿ. ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ವಹಿಸಿದ್ದರು.

ಮಾಜಿ ಸಚಿವರಾದ ಬಿ. ರಮಾನಾಥ ರೈ, ಬಿ. ನಾಗರಾಜ ಶೆಟ್ಟಿ ಕೃಷ್ಣ ಜೆ. ಪಾಲೆಮಾರ್, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ., ಮಾಜಿ ಶಾಸಕರಾದ ಸಂಜೀವ ಮಠಂದೂರು, ಪದ್ಮನಾಭ ಕೊಟ್ಟಾರಿ, ಕ್ಷೇತ್ರದ ಟ್ರಸ್ಟಿಗಳಾದ ಭಾಸ್ಕರ ಶೆಟ್ಟಿ ಪುಣೆ, ಉದ್ಯಮಿ ಗಿರಿಧರ ಶೆಟ್ಟಿ, ರಂಜಿತ್ ಶೆಟ್ಟಿ ಗುಬ್ಯ, ರಂಜಿತ್ ಮಡಗಾಂವ್, ರಾಕೇಶ್, ಜನಾರ್ದನ ನಾಸಿಕ್, ಮಹಿಳಾ ಸಮಿತಿ ಗೌರವಾಧ್ಯಕ್ಷೆ ರೇವತಿ ಪೆರ್ನೆ, ಸುರೇಶ್ ಪತಾರೆ, ನಿತಿನ್ ಅಡ್ಸಲ್, ಲಿಭೇಷ್ ನಾಯರ್, ಸಂದೀಪ್ ಪತಾರೆ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ವನಿತಾ ವಿ.ಶೆಟ್ಟಿ ಸುಣ್ಣಂಬಳ ಮತ್ತಿತರರು ಉಪಸ್ಥಿತರಿದ್ದರು.

ಬೆಳ್ಳಿಹಬ್ಬ ಮಹೋತ್ಸವ ಸಮಿತಿ ಅಧ್ಯಕ್ಷ ಮೋನಪ್ಪ ಭಂಡಾರಿ ಮಂಗಳೂರು ಸ್ವಾಗತಿಸಿದರು. ಗೀತಾ ಪುರುಷೋತ್ತಮ, ನವೀನ್ ಕುಲಾಲ್, ಸುಧೀರ್ ಶೆಟ್ಟಿ, ಅಭಿಜಿತ್, ಉಮಾವತಿ ಚಂದ್ರಶೇಖರ್, ರೇಶ್ಮಾ ಮನೋಹರ್, ಎಚ್. ಕೆ. ನಯನಾಡು ಸನ್ಮಾನ ಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

More articles

Latest article