Wednesday, October 18, 2023

ಮಾಣಿ ಗ್ರಾ.ಪಂಚಾಯತ್ ನಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಗೃಹಲಕ್ಷ್ಮಿ ಯೋಜನೆಯ ಚಾಲನಾ ಕಾರ್ಯಕ್ರಮದ ನೇರ ವೀಕ್ಷಣೆ

Must read

2013 ರಿಂದ 2018 ವರೆಗಿನ ಸರ್ಕಾರದಲ್ಲಿ ಹಲವು ಭಾಗ್ಯಗಳನ್ನು ಕರುಣಿಸಿದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಸಾಲಿನಲ್ಲಿ ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ನಾಲ್ಕನ್ನು ನೂರು ದಿನಗಳ ಒಳಗೆ ಹಂತಹಂತವಾಗಿ ಜಾರಿಗೊಳಿಸಿದ್ದು, ಇವೆಲ್ಲವುಗಳು ಜನರಿಗೆ ಬಹಳಷ್ಟು ಸಹಕಾರಿಯಾಗಲಿದೆ ಎಂದು ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಹೇಳಿದರು.

ಮಾಣಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮೈಸೂರಿನಲ್ಲಿ ಜರಗಿದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ಚಾಲನಾ ಕಾರ್ಯಕ್ರಮದ ನೇರ ವೀಕ್ಷಣೆಯಲ್ಲಿ ಅವರು ಮಾತನಾಡಿದರು.

ಮಾಣಿ ಗ್ರಾಮದಲ್ಲಿ ಸುಮಾರು 700ಕ್ಕಿಂತಲೂ ಹೆಚ್ಚಿನ ಫಲಾನುಭವಿಗಳು ನೋಂದಣಿಯನ್ನು ಮಾಡಿದ್ದು ಮುಂದಿನ ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ನೇರ ವರ್ಗಾವಣೆ ಆಗಲಿದೆ. ಇದರಿಂದ ಬೆಲೆಯೇರಿಕೆ ಮತ್ತು ಇತರ ಆರ್ಥಿಕ ಸಮಸ್ಯೆಗಳಿಂದ ಕಷ್ಟಪಡುವವರಿಗೆ ದೊಡ್ಡ ಮಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು.

ದೊಡ್ಡ ಗಾತ್ರದ ಎಲ್ಇಡಿ ಪರದೆಯಲ್ಲಿ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ನೂರಾರು ಮಂದಿ ಫಲಾನುಭವಿಗಳು ಭಾಗವಹಿದ್ದರು. ಪಂಚಾಯತ್ ಪರಿಸರವನ್ನು ವಿಶಿಷ್ಟ ರೀತಿಯಲ್ಲಿ ಶೃಂಗರಿಸಲಾಗಿತ್ತು.

ಗ್ರಾಮ ಪಂಚಾಯತ್ ಅಧ್ಯಕ್ಷ ಇಬ್ರಾಹಿಂ.ಕೆ.ಮಾಣಿ, ಉಪಾಧ್ಯಕ್ಷೆ ಸುಜಾತಾ ದೀಪ ಪ್ರಜ್ವಲನಗೊಳಿಸಿದರು.

ಸದಸ್ಯ ಸುದೀಪ್ ಕುಮಾರ್ ಶೆಟ್ಟಿ ಪ್ರಸ್ತಾವನೆಗೈದರು. ಸದಸ್ಯರಾದ ಮೆಲ್ವಿನ್ ಕಿಶೋರ್ ಮಾರ್ಟಿಸ್, ರಮಣಿ. ಡಿ.ಪೂಜಾರಿ, ಪ್ರೀತಿ ಡಿನ್ನಾ ಪಿರೇರಾ, ಸೀತಾ, ಮಾಜಿ ಸದಸ್ಯರಾದ ವನಿತಾ, ಸುಲೈಮಾನ್, ಸುನಂದ, ಉಷಾ ಮತ್ತಿತರರು ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ಸಹಕರಿಸಿದರು.

More articles

Latest article