Sunday, October 22, 2023

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

Must read

ವಿಟ್ಲ: ಶ್ರದ್ಧೆಯೇ ಯಶಸ್ಸಿನ ಕೀಲಿಕೈಯಾಗಿದೆ. ಅಂತಃಶಕ್ತಿ ಬೆಳೆದಾಗ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು. ಸವಾಲುಗಳಿಗೆ ಆಧ್ಯಾತ್ಮ ಒಂದೇ ಉತ್ತರವಾಗಿದೆ. ಭಾರತದ ಚಂದ್ರಯಾನದಲ್ಲಿ ವಿಜ್ಞಾನ ಮತ್ತು ಆಧ್ಯಾತ್ಮ ಮೇಳೈಸಿದೆ. ವಿಶ್ವಾಸವನ್ನು ತುಂಬಿದಾಗ ಭವಿಷ್ಯದಲ್ಲಿ ಯಶಸ್ಸು ನಿಶ್ಚಿತ. ರಾಷ್ಟ್ರ ಪ್ರಜ್ಞೆಯಲ್ಲಿ ಬದುಕುವ ಕಾರ್ಯವಾಗಬೇಕು. ಬೆಳೆಯುವ ಸಂಸ್ಥೆಯ ಕಡೆಗೆ ಎಲ್ಲರ ಗಮನವಿರುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಭಾನುವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತದ ೨೦೨೨-೨೩ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸಂಸ್ಥೆಯ ಬೆಳವಣಿಗೆಯಲ್ಲಿ ಸಂಘಟನೆಯ ಪಾತ್ರ ದೊಡ್ಡದಿದ್ದು, ಎಲ್ಲರೂ ಸಹಕಾರಿಸಿಕೊಂಡು ಮುನ್ನಡೆದಾಗ ಯಶಸ್ಸು ಲಭಿಸುತ್ತದೆ. ಸಣ್ಣ ಸಮಯದಲ್ಲಿ ದೊಡ್ಡ ಸಾಧನೆಯನ್ನು ಸಹಕಾರಿ ಮಾಡಿದೆ. ಅರ್ಥವ್ಯವಸ್ಥೆಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆಯಿದ್ದಾಗ ಸಮಾಜದ ಬೆಳವಣಿಗೆಯಾಗುತ್ತದೆ. ಗ್ರಾಹಕರು ಸಹಕಾರಿ ಜೀವಾಳವಾಗಿದ್ದು, ನಿಸ್ವಾರ್ಥತೆಯಿಂದ ಕೆಲಸ ಮಾಡುವ ನಿರ್ದೇಶಕ ಮಂಡಳಿ, ಸೇವಾ ಮನೋಭಾವದಿಂದ ತೊಡಗಿರುವ ಸಿಬ್ಬಂದಿಗಳಿಂದ ಸಹಕಾರಿ ಉನ್ನತಿಗೇರಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಸುರೇಶ್ ರೈ ಮಾತನಾಡಿ ಸಹಕಾರಿ ೧೯ ಶಾಖೆಗಳ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು, ೨೦೨೨-೨೩ನೇ ಸಾಲಿನಲ್ಲಿ ೨೫೦.೦೧ಕೋಟಿ ಠೇವಣಿ ಹೊಂದಿ, ೧೮೨.೭೫ಕೋಟಿ ರೂ.ಗಳ ಸಾಲ ನೀಡಲಾಗಿದೆ. ವರದಿ ವರ್ಷದಲ್ಲಿ ೪೩೨.೭೬ಕೋಟಿ ವ್ಯವಹಾರವನ್ನು ನಡೆಸಿ, ೩.೨೨ ಕೋಟಿ ನಿವ್ವಳ ಲಾಭವನ್ನು ಗಳಿಸಿದೆ. ಗ್ರಾಮೀಣ ಪ್ರದೇಶದ ಬಡ ಜನರು ಸ್ವಾವಲಂಬಿಗಳಾಬೇಕೆಂಬ ಪೂಜ್ಯಶ್ರೀಗಳ ಕಲ್ಪನೆಯ ಕೂಸಾದ ಗ್ರಾಮ ವಿಕಾಸ ಯೋಜನೆಯ ಎಲ್ಲಾ ಆರ್ಥಿಕ ಚಟುವಟಿಕೆಯನ್ನು ಸಹಕಾರಿಯ ಮೂಲಕ ಮಾಡಿಕೊಂಡು ಬರಲಾಗುತ್ತಿದೆ. ಸದಸ್ಯರಿಗೆ ಶೇ.೧೫ರ ಡಿವಿಡೆಂಡ್ ನೀಡಲಾಗುವುದು ಎಂದು ತಿಳಿಸಿದರು.

ಸಾಧ್ವಿ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು. ಸಂಘದ ನಿರ್ದೇಶಕರಾದ ವೇಣುಗೋಪಾಲ ಮಾರ್ಲ, ತಾರಾನಾಥ ಶೆಟ್ಟಿ, ಲೋಕನಾಥ ಶೆಟ್ಟಿ, ಶಾರದಮಣಿ, ಸರಿತಾ ಅಶೋಕ್, ಯು. ದೇವಪ್ಪ ನಾಯಕ್ ಉಪ್ಪಳಿಗೆ, ಸೋಮಪ್ಪ ನಾಕ್ ಕಡಬ, ಗಣೇಶ್ ಅತ್ತಾವರ, ಭವಾನಿಶಂಕರ್ ಶೆಟ್ಟಿ, ಅಶೋಕ್ ಕುಮಾರ್ ಯು.ಎಸ್., ಜಯಪ್ರಕಾಶ್ ರೈ. ಎನ್, ಎಂ. ಉಗ್ಗಪ್ಪ ಶೆಟ್ಟಿ, ಕರುಣಾಕರ ಜೆ. ಉಚ್ಚಿಲ, ಚಾರ್ಟರ್ಡ್ ಅಕೌಂಟೆಂಟ್ ಬಾಲಸುಬ್ರಹ್ಮಣ್ಯ ಎನ್. ಉಪಸ್ಥಿತರಿದ್ದರು.

ಶ್ರದ್ಧಾ ಜೆ. ಶೆಟ್ಟಿ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು ವರದಿ ವಾಚನ ನಡೆಸಿದರು. ನಿರ್ದೇಶಕ ಗಣಪತಿ ಭಟ್ ಸೇರಾಜೆ ವಂದಿಸಿದರು. ಪುತ್ತೂರು ಶಾಖಾ ವ್ಯವಸ್ಥಾಪಕಿ ಪವಿತ್ರ ಎನ್. ಕಾರ್ಯಕ್ರಮ ನಿರೂಪಿಸಿದರು.

More articles

Latest article