Wednesday, October 25, 2023

ಕಡಬದಿಂದ ಸೆರೆ ಹಿಡಿಯಲಾಗಿದ್ದ ನರ ಹಂತಕ ಕಾಡಾನೆ ಸಾವು

Must read

ಸುಬ್ರಹ್ಮಣ್ಯ: ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ಇಬ್ಬರನ್ನು ಬಲಿ ಪಡೆದ ಕಾರಣಕ್ಕೆ ಕಡಬ ತಾಲೂಕಿನ ಕೊಂಬಾರು ಸಮೀಪ ಸೆರೆ ಹಿಡಿಯಲಾಗಿದ್ದ ಕಾಡಾನೆ ಮೃತಪಟ್ಟಿದೆ ಎಂದು ವರದಿಯಾಗಿದೆ.

ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಸಮೀಪದ ನೈಲದಲ್ಲಿ ಫೆಬ್ರವರಿ 20ರಂದು ಕಾಡಾನೆ ದಾಳಿಗೆ ರಂಜಿತಾ ಹಾಗೂ ರಮೇಶ್ ರೈ ಎಂಬವರು ಮೃತಪಟ್ಟಿದ್ದರು.

ಘಟನೆಯಿಂದ ಆಕ್ರೋಶಗೊಂಡಿದ್ದ ಸಾರ್ವಜನಿಕರು ಕಾಡಾನೆ ಸೆರೆ ಹಿಡಿದು ಸ್ಥಳಾಂತರಿಸುವಂತೆ ಒತ್ತಾಯಿಸಿದ್ದರು. ಬಳಿಕ ಘಟನಾ ಸ್ಥಳಕ್ಕೆ ಅಂದಿನ ಜಿಲ್ಲಾಧಿಕಾರಿ ರವಿಕುಮಾರ್ ಹಾಗೂ ಡಿಸಿಎಫ್ ದಿನೇಶ್ ಕುಮಾರ್ ಅವರು ಭೇಟಿ ನೀಡಿ ಕಾಡಾನೆ ಸೆರೆ ಹಿಡಿಯುವ ಭರವಸೆ ನೀಡಿದ್ದರು.

ಮರುದಿನವೇ ಕಾಡಾನೆ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಲಾಗಿತ್ತು. ಐದು ಸಾಕಾನೆಗಳನ್ನು ತರಿಸಿ ಕಾರ್ಯಾಚರಣೆ ಆರಂಭಿಸಿ, ಮೂರನೇ ದಿನ ಕಡಬ ತಾಲೂಕಿನ ಕೊಂಬಾರು ಸಮೀಪದ ಮಂಡೆಕರ ಎಂಬಲ್ಲಿ ನರ ಹಂತಕ ಕಾಡಾನೆಯನ್ನು ಸೆರೆಹಿಡಿಯಲಾಗಿತ್ತು. ಬಳಿಕ ಅದನ್ನು ಕೊಡಗಿನ ಆನೆ ಶಿಬಿರಕ್ಕೆ ಕೊಂಡೊಯ್ಯಲಾಗಿತ್ತು. ಆದರೆ ಶುಕ್ರವಾರ ಈ ಆನೆ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಅದರ ಮರಣೋತ್ತರ ಪರೀಕ್ಷೆ ನಡೆಸುವ ಕಾರ್ಯ ಮಾಡಲಾಯಿತು.

More articles

Latest article