ಬೆಳ್ತಂಗಡಿ: ಪ್ರಕರಣವೊ೦ದಕ್ಕೆ ಸಂಬಂಧಿಸಿದಂತೆ ಕಳೆದ 27 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ವರ್ಕಾಡಿ ನಿವಾಸಿ ಎಸ್. ಎ. ಅಶ್ರಫ್ ಬ೦ಧಿತ ಆರೋಪಿ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 1996ರಲ್ಲಿ ದಾಖಲಾಗಿದ್ದ ಶ್ರೀಗಂಧ ಕಳವು ಪ್ರಕರಣದ ಆರೋಪಿಯಾಗಿದ್ದ ಎಸ್. ಎ. ಅಶ್ರಫ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 27 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ಮುಂಬಯಿ ನಗರ ಹಾಗೂ ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡಿದ್ದ.
ಬಂಟ್ವಾಳ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಠಾಣಾ ಪ್ರಭಾರ ನಿರೀಕ್ಷಕರಾದ ನಾಗೇಶ್ ಕದ್ರಿ ಹಾಗೂ ಉಪನಿರೀಕ್ಷಕರರಾದ ಧನರಾಜ್ ಟಿ.ಎಂ. ಹಾಗೂ ಚಂದ್ರಶೇಖರ್ ನೇತೃತ್ವದಲ್ಲಿ ಹೆಡ್ ಕಾನ್‌ಸ್ಟೆಬಲ್‌ಗಳಾದ ಬೆನ್ನಿಚ್ಚನ್, ಗಂಗಾಧರ್ ಹಾಗೂ ಆಶೋಕ್ ಅವರು ಕೇರಳ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿ ವಿರುದ್ಧ ಕಾಸರಗೋಡು ಪೊಲೀಸ್ ಠಾಣೆಯಲ್ಲಿ ಕಲಂ: 125/2004 ಕಲಂ: 279,304 (ಎ)ರಂತೆ ಹಾಗೂ ಉಪ್ಪಿನಂಗಡಿ ಮತ್ತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಫಾರೆಸ್ಟ್ ಕಾಯ್ದೆಯಡಿ ದಾಖಲಾಗಿರುವ ಎಲ್‌ಪಿಸಿ ಪ್ರಕರಣ ವಿಚಾರಣೆಗೆ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.