Wednesday, October 18, 2023

ಬಂಟ್ವಾಳ ತಾಲೂಕು ಆಚರಣಾ ಸಮಿತಿ ವತಿಯಿಂದ 77 ನೇ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Must read

ಬಂಟ್ವಾಳ: ಬಂಟ್ವಾಳ ತಾಲೂಕು ಆಚರಣಾ ಸಮಿತಿ ವತಿಯಿಂದ ಆಡಳಿತ ಸೌಧದಲ್ಲಿ 77 ನೇ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.

ತಹಶಿಲ್ದಾರ್ ಬಿ. ಎಸ್.ಕೂಡಲಗಿ ಧ್ವಜಾರೋಹಣ ನಡೆಸಿದರು. ಆರಂಭದಲ್ಲಿ ಶಾಲಾ ಮಕ್ಕಳ ಹಾಗೂ ಪೋಲೀಸ್ ಆಕರ್ಷಕ ಪಥಸಂಚಲನ ನಡೆಯಿತು.

ಬಳಿಕ ಆಡಳಿತ ಸೌಧದ ಕಚೇರಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅವರು ಮಾತನಾಡಿ, ಸ್ವಾವಲಂಬಿ ಭಾರತವಾಗಿ ಮಾರ್ಪಾಡು ಆಗಬೇಕಾದರೆ ಪ್ರತಿ‌ ಹಳ್ಳಿಯನ್ನು ಅಭಿವೃದ್ಧಿ ಮಾಡಬೇಕು ಎಂಬ ಮಹತ್ತರವಾದ ಯೋಚನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದು, ಸರ್ವ ವ್ಯಾಪಿಯಾಗಿ ಸರ್ವಸ್ಪರ್ಶಿಯಾಗಿ ಅಭಿವೃದ್ಧಿಗಾಗಿ ಶ್ರಮವಹಿಸಿದ್ದಾರೆ.

ಆತ್ಮ ನಿರ್ಬರ ಭಾರತಕ್ಕೆ ನಾವು ಕೈ ಜೋಡಿಸಿದರೆ ಸ್ವಾವಲಂಬಿ ಗ್ರಾಮವಾಗಿ ಮಾರ್ಪಾಡು ಹೊಂದಲು ಹೆಚ್ಚು ದೂರವಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ದೇಶಭಕ್ತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳಾಗಬೇಕು. ತಾಲೂಕಿನ ಪ್ರತಿ ಗ್ರಾಮದ ಜನರು ಭಾಗವಹಿಸುವ ನಿಟ್ಟಿನಲ್ಲಿ ಬಯಲು ರಂಗಮಂದಿರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಮಾಡುವಂತೆ ತಾಲೂಕು ಆಚರಣೆ ಸಮಿತಿಗೆ ಸೂಚನೆ ನೀಡಿದರು. ಸ್ವಾತಂತ್ರ್ಯ ಸಿಕ್ಕಿ ಇಷ್ಟು ವರ್ಷವಾದರೂ ಭ್ರಷ್ಟಾಚಾರದಂತಹ ಅನೇಕ ಪಿಡುಗುಗಳು ಇನ್ನೂ ಉಳಿದಿದೆ. ಕೆಟ್ಟದರ ಬಗ್ಗೆ ಹೆಚ್ಚು ಪ್ರಚಾರ ಮಾಡುವುದನ್ನು ಕಡಿಮೆ ಮಾಡಿ ಉತ್ತಮ ವಿಚಾರಗಳ ಬಗ್ಗೆ ಮಾತನಾಡಿದಾಗ ,ಗುರುತಿಸಿದಾಗ ಯುವ ಪೀಳಿಗೆಗೆ ಹೊಸಚಿಂತನೆಯನ್ನು ಮೂಡಿಸುವ ಮೂಲಕ ಮುಂದಿನ ದಿನಗಳಲ್ಲಿ ಸಂಭ್ರಮದ ಆಚರಣೆಗಳಿಗೆ ನಾವೆಲ್ಲರೂ ಸಾಕ್ಷಿಯಾಗಬೇಕು ಎಂದು ಅವರು‌ತಿಳಿಸಿದರು.

ಪ್ರಮುಖ ಭಾಷಣ ಮಾಡಿದ ತುಂಬೆ ಕಾಲೇಜಿನ ಪ್ರಾಂಶುಪಾಲರಾದ ಗಂಗಾಧರ ಅಳ್ವ ಮಾತನಾಡಿ, ನಡವಳಿಕೆ ಮೂಲಕ ದೇಶಪ್ರೇಮವನ್ನು ಹೆಚ್ಚಿಸುವ ಜೊತೆಗೆ ಪ್ರತಿಯೊಬ್ಬ ವ್ಯಕ್ತಿಯೂ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದಾಗ ಈ ದೇಶದ ಉತ್ತಮ ಪ್ರಜೆಯಾಗಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಹೊಸ ಪ್ರಯತ್ನಗಳನ್ನು ಮಾಡುವ ಒಳ್ಳೆಯ ನಾಗರಿಕನಾಗಿ , ಪರಿಸರ ಸಂರಕ್ಷಣೆಯ ದೊಡ್ಡ ಜವಬ್ದಾರಿಯನ್ನು ನಾವು ವಹಿಸಿಕೊಳ್ಳುವ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾ.ಪಂ‌‌.ನ ಪ್ರಭಾರ ಸಹಾಯಕ ನಿರ್ದೇಶಕ ದಿನೇಶ್, ಅಕ್ಷರದಾಸೋಹ ಸಹಾಯಕ ನಿರ್ದೇಶಕ ನೋಣಯ್ಯ ಮತ್ತಿತರರು ಉಪಸ್ಥಿತರಿದ್ದರು.

More articles

Latest article