Sunday, October 22, 2023

ಕಿಡ್ನಿ ಸಮಸ್ಯೆ ಹಾಗೂ ಬಡತನದಿಂದ ಬಳಲುತ್ತಿದ್ದ ಕಲಾವಿದ ಆತ್ಮಹತ್ಯೆಗೆ ಶರಣಾದ.

Must read

ಬಂಟ್ವಾಳ: ಒಂದಡೆ ಅನಾರೋಗ್ಯ, ಇನ್ನೊಂದೆಡೆ ಉದ್ಯೋಗ ಇಲ್ಲ ಜೀವನವೇ ದುಸ್ತರ , ಬದುಕಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದ ಕಲಾವಿದ ಯುವಕನೋರ್ವ ಬಾವಿಗೆ ಹಾರಿ ಜೀವ ಕಳೆದುಕೊಂಡ ಘಟನೆ ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಮಿತ್ತಮಜಲು ಎಂಬಲ್ಲಿ ನಡೆದಿದೆ.

ಮಿತ್ತಮಜಲು ನಿವಾಸಿ ಚಿತ್ರಕಾರ ಸಾಗರ್ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ ಯುವಕ.

ಬೆಳಿಗ್ಗೆ ಸುಮಾರು 8.30 ರ ವೇಳೆ ಮನೆಯಂಗಳದಲ್ಲಿ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಾರಣವೇನು?

ಸಾಗರ್ ಆತ್ಮಹತ್ಯೆ ಮಾಡಿಕೊಳ್ಳಲು ಸ್ಪಷ್ಟವಾದ ಕಾರಣ ನಿಗೂಢವಾಗಿದೆಯಾದರೂ ಆತನ ಅನಾರೋಗ್ಯದ ಕಾರಣ ಜೀವನದಲ್ಲಿ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಅಂದಾಜಿಸಲಾಗಿದೆ.

ಆದರೆ ಈತ ಕಳೆದ ಕೆಲವು ದಿನಗಳಿಂದ ಮಾನಸಿಕವಾಗಿ ನೊಂದಿದ್ದಲ್ಲದೆ ,ನೆರೆಹೊರೆಯವರ ಸ್ನೇಹಿತರ ಜೊತೆ ಈತನ ನೋವನ್ನು ಹೇಳಿಕೊಂಡಿದ್ದ ಎಂದು ಹೇಳಲಾಗಿದೆ.

ಸಾಗರ್ ಒಬ್ಬ ಅತ್ಯದ್ಭುತ ಚಿತ್ರಕಾರ, ಆದರೆ ಆತನ ಕಲೆಗೆ ಜೀವ ತುಂಬಲು ಆ ವಿಧಿ ಬಿಡಲಿಲ್ಲ. ಕಲಾವಿದನಾಗಿದ್ದ ಸಾಗರ್ ಕಳೆದ ಎರಡು ವರ್ಷಗಳ ಹಿಂದೆ ಬಿಸಿರೋಡಿನ ಸಿ.ಡಿ.ಪಿ.ಒ.ಕಚೇರಿಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದ.ಆದರೆ ಅದಾಗಲೇ ಈತನಿಗೆ ಮೊದಲೇ ಇದ್ದ ಕಿಡ್ನಿ ಸಮಸ್ಯೆ ಉಲ್ಬಣಗೊಂಡಿತು. ಹಾಗಾಗಿ ಈತ ಕೆಲಸ ಬಿಟ್ಟು ಮನೆಯಲ್ಲೇ ಇದ್ದ.

ವಾರಕ್ಕೊಮ್ಮೆ ಡಯಾಲಿಸಿಸ್ ಮಾಡಲೇಬೇಕು ಎಂಬ ಸ್ಥಿತಿ ಒಂದೆಡೆ,ಇನ್ನೊಂದು ಕಡೆ ಎರಡು ಕಿಡ್ನಿ ವೈಫಲ್ಯ ಕಂಡ ಹಿನ್ನೆಲೆಯಲ್ಲಿ ಈತನ ತಂದೆಯ ಒಂದು ಕಿಡ್ನಿಯನ್ನು ನೀಡಲಾಗಿತ್ತು.

ಮರದ ಕೆಲಸ ಮಾಡುತ್ತಿದ್ದ ತಂದೆಯವರು ಕಿಡ್ನಿ ಮಗನಿಗೆ ನೀಡಿದ ಬಳಿಕ ಕೆಲಸ ಮಾಡಲು ಸ್ವಲ್ಪ ಕಷ್ಟದ ಸ್ಥಿತಿ ಉಂಟಾಗಿತ್ತು. ಈ ನಡುವೆ ಮನೆಯಲ್ಲಿ ತಾಯಿಗೂ ಸ್ವಲ್ಪ ಅನಾರೋಗ್ಯದ ಸಮಸ್ಯೆ ಉಂಟಾಗಿತ್ತು.

ಮನೆಯಲ್ಲಿ ಎಲ್ಲರು ಅನಾರೋಗ್ಯ ಪೀಡಿತರಾಗಿ ದುಡಿಯುವ ಕೈಗಳಿಗೆ ಶಕ್ತಿಯಿಲ್ಲ, ಔಷಧಿಗೆ ಕಾಸಿಲ್ಲ, ಸರಿಯಾದ ಉದ್ಯೋಗವು ಇಲ್ಲ ಹೀಗೆ ಅನೇಕ ಬಾರಿ ಮನನೊಂದು ಈ ವಿಚಾರವನ್ನು ಸ್ನೇಹಿತರ ಬಳಿ ಹೇಳಿಕೊಂಡಿದ್ದ ಎಂದು ಹೇಳಲಾಗಿದೆ.

ಈತನಿಗೆ ಕಿಡ್ನಿ ವೈಫಲ್ಯದ ಸಮಸ್ಯೆ ಉಂಟಾದ ಅ ಸಂದರ್ಭದಲ್ಲಿ ಮಾಧ್ಯಮಗಳು ನೆರವಿಗಾಗಿ ವರದಿಗಳನ್ನು ಮಾಡಿತ್ತು.

ಆದರೆ ಅತ್ಯಂತ ಕಷ್ಟಕರ ಜೀವನವನ್ನು ಸಹಿಸಲಾರದೆ ಸಾಗರ್ ಬಾವಿಗೆ ಹಾರಿ ಆತ್ಮಹತ್ಯೆ ‌ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರ ಮಾತಾಗಿದೆ.

ಸುಮಾರು 30 ಅಡಿ ಆಳದಲ್ಲಿರುವ ಬಾವಿಯಿಂದ ಸಾಗರ್ ಅವರ ಮೃತದೇಹವನ್ನು ಬಂಟ್ವಾಳ ಅಗ್ನಿಶಾಮಕ ದಳದವರು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಸುನಿಲ್ ಕುಮಾರ್ ಅವರ ಮಾರ್ಗದರ್ಶನ ದಲ್ಲಿ, ಸಿಬ್ಬಂದಿಗಳಾದ ರೋಹಿತ್, ಕಿರಣ್ ಕುಮಾರ್, ರಾಜೇಶ್, ಸುರೇಂದ್ರ ಹಾಗೂ ನಾಗರಾಜ್ ಅವರ ನೆರವಿನಿಂದ ಬಾವಿಯಿಂದ ಮೃತದೇಹವನ್ನು ಮೇಲಕ್ಕೆತ್ತಲಾಯಿತು.

More articles

Latest article