ಸುರತ್ಕಲ್: ಇಲ್ಲಿನ ಕೃಷ್ಣಾಪುರ 6ನೇ ಬ್ಲಾಕ್‌ನಲ್ಲಿ ಮಳೆ ನೀರು ಹರಿಯುವ ಚರಂಡಿ ಕಾಮಗಾರಿಗಾಗಿ ಅಗೆಯುತ್ತಿದ್ದ ಸಂದರ್ಭ ಬದಿಯಲ್ಲಿದ್ದ ಕಂಪೌಂಡು ಕುಸಿದು ಬಿದ್ದ ಪರಿಣಾಮ ಓರ್ವ ಕಾರ್ಮಿಕ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.
ಬಜಪೆ ಕರಂಬಾರು ನಿವಾಸಿ ಹನೀಫ್ ಮೃತ ವ್ಯಕ್ತಿಯಾಗಿದ್ದಾರೆ
ಕೃಷ್ಣಾಪುರ ನಿವಾಸಿ ಶರೀಫ್ ಎಂಬವರು ರಸ್ತೆ ಬದಿ ಚರಂಡಿ ನಿರ್ಮಾಣದ ಗುತ್ತಿಗೆ ಪಡೆದುಕೊಂಡು ಕೆಲಸ ಮಾಡಿಸುತ್ತಿದ್ದರು ಎಂದು ತಿಳಿದುಬಂದಿದೆ. ಹನೀಫ್ ಮತ್ತು ಮಣಿ ಅವರು ಚರಂಡಿ ಅಗೆಯುತ್ತಿದ್ದ ವೇಳೆ ಏಕಾಏಕಿ ಪಕ್ಕದಲ್ಲಿದ್ದ ಕಾಂಪೌಂಡ್ ಗೋಡೆ ಕುಸಿದು ಕೆಲಸಗಾರರ ಮೇಲೆ ಬಿದ್ದಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲಾಗಲೇ ಹನೀಫ್ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಮಣಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.