ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿಗಳು ಭತ್ತದ ಗಿಡ ನಾಟಿ ಮಾಡುವ ಗದ್ದೆಯಲ್ಲಿ ಒಂದು ದಿನ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿಯ ರಾಮಣ್ಣ ಅವರ ಉತ್ತ ಗದ್ದೆಯಲ್ಲಿ ನೇಜಿ ನಡುವ ಪ್ರಕ್ರಿಯೆ ನಡೆಯಿತು. ಗದ್ದೆಗಳಲ್ಲಿ ಸಸಿ ನೆಟ್ಟು, ಕೆಸರಲ್ಲಿ ಮಿಂದೆದ್ದು ವಿದ್ಯಾರ್ಥಿಗಳು ನೇಗಿಲ ಯೋಗಿಗಳಾದರು. ಹಿರಿಯರು ಹೇಳಿದ ಓ ಬೇಲೆ ಜನಪದ ಪದ್ಯವನ್ನು ಹಾಡುತ್ತಾ ವಿದ್ಯಾರ್ಥಿಗಳು ಸಂತಸದಿಂದ ಭತ್ತ ನಾಟಿ ಮಾಡಿದರು.
ಬೇಸಾಯ ಚಟುವಟಿಕೆ ಮರೆಯುತ್ತಿರುವ ಈ ಕಾಲದಲ್ಲಿ ಭತ್ತ ನಾಟಿ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ನೀಡಿದ ಈ ಪ್ರಾತ್ಯಕ್ಷಿಕೆಯುಕ್ತ ಪಾಠ ವಿದ್ಯಾರ್ಥಿಗಳಲ್ಲಿ ಕೃಷಿ ಜಾಗೃತಿ ನೀಡುವಲ್ಲಿ ಸಹಕಾರಿಯಾಯಿತು. ಪ್ರಾಚಾರ್ಯ ಸೋಮಶೇಖರ ನಾಯಕ್ ಅವರ ಕನಸಿನ ಕೂಸಾದ ಈ ಕಾರ್ಯಕ್ರಮ ಮಾದರಿಯಾಗಿ ಕಂಡು ಬಂತು.
ನೇಜಿ ನೆಟ್ಟ ವಿದ್ಯಾರ್ಥಿಗಳು:
ಕೈಯಲ್ಲಿ ಪೆನ್ನು,ಪುಸ್ತಕ ಹಿಡಿದು ಬರೆಯುವುದರ ಮೂಲಕ ಪಾಠಪ್ರವಚನ ಆಲಿಸುವ ಕಾಲೇಜು ವಿದ್ಯಾರ್ಥಿಗಳು, ಸಾಂಪ್ರದಾಯಿಕ ಉಡುಗೆ ಧರಿಸಿ ಕೆಸರಿನ ಗದ್ದೆಗಿಳಿದು ನೇಜಿ ನಟ್ಟು ಕೈಕೆಸರಾದರೆ ಬಾಯಿ ಮೊಸರು ಎಂಬ ಪಾಠವನ್ನು ಕಲಿತರು. ರೈತನ ನಿಜ ಜೀವನದ ಕಠಿಣ ಪರಿಶ್ರಮದ ಕುರಿತು ನೈಜ ಅನುಭವ ಪಡೆದುಕೊಂಡರು.ಈ ಕಾರ್ಯದ ಮೂಲಕ ನೇಗಿಲ ಯೋಗಿಯ ನೈಜ ಶ್ರಮ ವಿದ್ಯಾರ್ಥಿಗಳಿಗೆ ತಿಳಿಯಿತು.
ಅನುರಣಿಸಿದ ಓಬೇಲೆ.. ಬೆರೆತ ಹಿರಿಯರು:
ಹಿರಿಯರಾದ ಮೋಂಟಿ ಅಮ್ಮ ಅವರು ಭತ್ತ ನಾಟಿ ಮಾಡುವ ವೇಳೆ ಓ..ಬೇಲೆ ಪದ ಹಾಡಿದರು. ಭತ್ತ ನಾಟಿಯ ವೇಳೆ ಓಬೇಲೆ.. ಹಾಡನ್ನು ಹಾಡುತ್ತಿದ್ದರು. ಸೇವಾ ಕೈಂಕರ್ಯದಲ್ಲಿ ಇದನ್ನು ವಿದ್ಯಾರ್ಥಿಗಳು ಚಾಚೂ ತಪ್ಪದೆ ಹಾಡುತ್ತಿದ್ದರು. ಈ ರೀತಿಯಾಗಿ ಈ ಹಾಡು ಈ ಪರಿಸರದಲ್ಲಿ ಅಧಿಕವಾಗಿ ಅನುರಣಿಸಿತು. ಅಲ್ಲದೆ ಹಿರಿಯರಾದ ಮೋಂಟಿ ಅಮ್ಮ ಅವರು ಪ್ರಾಚೀನ ಕಾಲದ ಸಂಪ್ರದಾಯ ಕಷ್ಟ ಪರಿಶ್ರಮದ ಬಗ್ಗೆ ತಮ್ಮ ಅನುಭವವನ್ನು ಹೇಳಿದರು.
ವರ್ಷಧಾರೆಯ ನಡುವೆ ನಾಟಿ:
ಕಾಲೇಜಿನ ಯುವ ವಿದ್ಯಾರ್ಥಿಗಳು ಗದ್ದೆಯಲ್ಲಿ ನಾಟಿ ಮಾಡುವ ಸಂದರ್ಭ ವರ್ಷಧಾರೆಯಾಯಿತು.ಭಾರೀ ಮಳೆಯ ನಡುವೆ ವಿದ್ಯಾರ್ಥಿಗಳು ತುಂಬು ಸಂತಸದಿAದ ನಾಟಿ ಕಾರ್ಯ ನಡೆಸಿದರು.ನಾಟಿ ಮಾಡುತ್ತಾ ಸಾಂಪ್ರದಾಯಿಕ ಓ ಬೇಲೆ ಹಾಡನ್ನು ಮರೆಯಲಿಲ್ಲ.
ಬೇಸಾಯದ ಜಾಗೃತಿ:
ಕಾಲೇಜಿನ ಸುಮಾರು ೧೫೦ಕ್ಕೂ ವಿದ್ಯಾರ್ಥಿಗಳು ನಾಟಿ ಕಾರ್ಯದಲ್ಲಿ ಭಾಗವಹಿಸಿದರು.ಕೆಸರುಮಯ ಉತ್ತ ಗದ್ದೆಯಲ್ಲಿ ಭತ್ತದ ಗಿಡಗಳನ್ನು ನೆಟ್ಟು ಅನ್ನದಾತನ ನಿಜ ವೃತ್ತಾಂತ ಹಾಗೂ ಗದ್ದೆಯ ಮಣ್ಣು ದೇಹಾರೋಗ್ಯ ವೃದ್ಧಿಗೆ ಅತ್ಯುತ್ತಮ ಔಷಧಿ ಎನ್ನುವ ಅರಿವು ಪಡೆದುಕೊಂಡರು.ಈ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಹಿರಿಯರಾದ ಮೋಂಟಿ ಅಮ್ಮ ನೀಡಿದರು.ಅಲ್ಲದೆ ನೇಜಿ ನಾಟಿ ಮಾಡುವ ಬಗ್ಗೆ ಮೋಂಟಿ ಅಮ್ಮ ಹೇಳಿಕೊಟ್ಟಿರು.
ಮನೆಯವರ ಸಹಕಾರ:
ವಿದ್ಯಾರ್ಥಿಗಳಿಗೆ ಕೃಷಿ ಜ್ಞಾನ ದೊರಕಬೇಕು ಎಂಬ ಕಾರಣಕ್ಕಾಗಿ ಜಮೀನಿನ ಮಾಲಕ ರೈತ ರಾಮಣ್ಣ ಪರ್ವತಮುಖಿ ವಿದ್ಯಾರ್ಥಿಗಳಿಗೆ ನಾಟಿ ಮಾಡಲು ಅವಕಾಶ ನೀಡಿದ್ದರು.ವಿದ್ಯಾರ್ಥಿಗಳು ನಾಟಿ ಮಾಡಲು ರಾಮಣ್ಣ ಅವರು ಸೇರಿದಂತೆ , ವೆಂಕಮ್ಮ ರಾಮಣ್ಣ, ಅವರ ಮಕ್ಕಳಾದ ಪದ್ಮನಾಭ ಪರ್ವತಮುಖಿ, ರವಿ ನಂದನ್, ಹಿರಿಯರಾದ ಮೋಂಟಿ ಅಮ್ಮ, ರಾಮಕ್ಕ, ಶಿವಮ್ಮ, ಪಾರ್ವತಿ, ಕೆಂಚಮ್ಮ, ಸುಧಾ, ಪೂರ್ಣಿಮಾ, ಲಲಿತಾ, ಪುಷ್ಪಾ, ಕಮಲಾ ಪರ್ವತಮುಖಿ, ಸುನಂದಾ, ಕುಸುಮಾ, ಹರೀಶ್ ಗುಂಡ್ಯ, ಕುಮಾರ ಗುಂಡ್ಯ, ಸತೀಶ್ ಗುಂಡ್ಯ, ಶಿವರಾಮ ಮಾನಾಡು, ಯೋಗೀಶ್ ನೂಚಿಲ ಸಹಕರಿಸಿ ತಾವೂ ನಾಟಿ ಕಾರ್ಯ ನೆರವೇರಿಸಿದರು. ಪ್ರಾಚಾರ್ಯ ಸೋಮಶೇಮಶೇಖರ ನಾಯಕ್, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೋಕೇಶ್ ಬಿ.ಎನ್, ಉಪನ್ಯಾಸಕರಾದ ರತ್ನಾಕರ ಸುಬ್ರಹ್ಮಣ್ಯ, ಮನೋಜ್ ಕುಮಾರ್ ಬಿ.ಎಸ್, ಸಿಬ್ಬಂಧಿಗಳಾದ ಮೋಹನ್ ಮಠ, ಕೇಶವ ಆರ್ಯ, ಸವಿತಾ ಬಿಳಿನೆಲೆ ಸಹಕರಿಸಿದರು.
“ಭಾರತವು ಕೃಷಿ ಪ್ರಧಾನವಾದ ದೇಶ.ರೈತರು ದೇಶದ ಬೆನ್ನೆಲುಬು. ಆದರೆ ಇಂದು ಗದ್ದೆಗಳು ಮಾಯವಾಗಿದೆ. ಗದ್ದೆ ಬೇಸಾಯ ಮೂಲೆಗುಂಪಾಗುತ್ತಿದೆ. ಬೇಸಾಯದ ನೈಜ ಸಂತಸ ಹಾಗೂ ಆವಶ್ಯಕತೆಯ ಕುರಿತು ಯುವ ಪೀಳಿಗೆ ಜಾಗೃತರಾಗಬೇಕು.ಅಲ್ಲದೆ ಅನ್ನದಾತನ ನಿಜ ವೃತ್ತಾಂತ ಎಳವೆಯಲ್ಲಿಯೇ ವಿದ್ಯಾರ್ಥಿಗಳಿಗೆ ತಿಳಿಯಬೇಕು. ಗದ್ದೆಯ ಮಣ್ಣು ದೇಹಾರೋಗ್ಯ ವೃದ್ಧಿಗೆ ಅತ್ಯುತ್ತಮ ಔಷಧಿ ಎನ್ನುವ ಅರಿವು ಯುವಜನಾಂಗದಲ್ಲಿ ಮೂಡಬೇಕು ಎಂಬ ಕಾರಣಕ್ಕಾಗಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು”
ಸೋಮಶೇಖರ ನಾಯಕ್, ಪ್ರಾಚಾರ್ಯರು
“ ಇಂತಹ ವಿಶಿಷ್ಠವಾದ ಕಾರ್ಯಕ್ರಮವು ಜೀವನ ಪಾಠವನ್ನು ಬೋಧಿಸಿತು.ಅಲ್ಲದೆ ನಮಗೆ ರೈತರ ಶ್ರಮದ ನೈಜ ಅನುಭವ ದೊರಕಿತು. ಇಂತಹ ಕಾರ್ಯಕ್ರಮಗಳು ಬದುಕಿಗೆ ಹೆಚ್ಚಿನ ಮಾರ್ಗದರ್ಶನದೊಂದಿಗೆ ವಿಶೇಷ ಅನುಭವ ಗಳಿಸಲು ಸಹಕಾರಿಯಾಗಿದೆ. ಮಣ್ಣಿನಿಂದ ದೇಹಾರೋಗ್ಯ ಉತ್ತಮವಾಗುತ್ತದೆ ಎಂಬ ವಿಷಯ ತಿಳಿದು ಸಂತಸವಾಯಿತು.ಅವಕಾಶ ನೀಡಿದ ಮನೆಯವರಿಗೆ ಧನ್ಯವಾದಗಳು”
ಅನನ್ಯಾ ಕಾಶಿಕಟ್ಟೆ-ಪ್ರಥಮ ಕಲಾ ವಿಭಾಗ