ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದ್ದು, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಕೈಗೊಂಡಿದೆ. ಈಗಾಗಲೇ ಚಾರ್ಮಾಡಿ ಘಾಟಿ ಯಲ್ಲಿ ಭೂ ಕುಸಿತ ಉಂಟಾಗಬಹುದಾದ 34 ಜಾಗಗಳನ್ನು ಗುರುತಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ, ಪ್ರಾಕೃತಿಕ ವಿಕೋಪ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಹ ಉಂಟಾಗುವ 63 ಜಾಗಗಳು ಮತ್ತು ರಸ್ತೆಗಳು ಸೇರಿದಂತೆ ಭೂ ಕುಸಿತವಾಗುವವ 87 ಜಾಗಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಲು ಸದ್ಯ ನಾಲ್ಕು ಮಾರ್ಗಗಳಿದ್ದು , ಇದರಲ್ಲಿ ಎರಡು ರಸ್ತೆಗಳು ಬಂದ್ ಆಗಿದೆ. ಹೀಗಾಗಿ ಆದಷ್ಟು ಕುಕ್ಕೆ ಸುಬ್ರಹ್ಮಣ್ಯ ಪ್ರವಾಸ ಕೈಗೊಳ್ಳುವವರು ಮುಂದೂಡುವುದು ಉತ್ತಮ. ಪ್ರವಾಸಿಗರು ಅಪಾಯಕಾರಿ ಜಲಪಾತ, ನೀರಿಗೆ ಇಳಿಯುವಂತ್ತಿಲ್ಲ. ದೇವಸ್ಥಾನ ಭೇಟಿಗೆ ಬಂದವರು ದೇವರ ದರ್ಶನ ಅಷ್ಟೇ ಮಾಡಿ. ರೆಡ್ ಅಲರ್ಟ್ ಇರುವ ಈ ರಸ್ತೆಗಳಲ್ಲಿ ಪ್ರಯಾಣ ಸೂಕ್ತವಲ್ಲ. ಯಾವುದೇ ಸಂದರ್ಭದಲ್ಲಿ ರಸ್ತೆ ಬಿರುಕು ಬಿಟ್ಟಲ್ಲಿ 112 ನಂಬರ್ಗೆ ಮಾಹಿತಿ ನೀಡಿ ಎಂದು ಸೂಚನೆ ನೀಡಿದರು.
ಈ ಬಾರಿ ಪ್ರತೀ ಗ್ರಾಮ ಪಂಚಾಯತಿ ನಗರಸಭೆ, ಪಾಲಿಕೆ ಸೇರಿ 296 ಪ್ರಾಕೃತಿಕ ವಿಕೋಪ ನಿಯಂತ್ರಣ ತಂಡ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಅನುದಾನ, ಅಧಿಕಾರ ಎಲ್ಲವನ್ನೂ ಅವರಿಗೆ ಕೊಡಲಾಗಿದೆ. ಎಲ್ಲವನ್ನೂ ಡಿಸಿ ಕಚೇರಿ ಮೂಲಕ ನಿಯಂತ್ರಣ ಮಾಡಲಾಗುತ್ತೆ ಎಂದು ತಿಳಿಸಿದರು.
ಈ ಬಾರಿಯ ಮಳೆ ಅನಾಹುತಕ್ಕೆ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.ಹೀಗಾಗಿ ಅಪಾಯಕಾರಿ ಜಾಗದಲ್ಲಿ ಇರುವವರನ್ನು ನೋಟಿಸ್ ಕೊಟ್ಟು ಸ್ಥಳಾಂತರ ಮಾಡಲಾಗುತ್ತದೆ. ಸ್ಥಳಾಂತರಕ್ಕೆ ನಿರಾಕರಿಸಿದರೆ ಪೊಲೀಸ್ ಬಲ ಪ್ರಯೋಗಿಸಿ ಸ್ಥಳಾಂತರ ಮಾಡುತ್ತೇವೆ . ಪ್ರಾಣ ಉಳಿಸಲು ಇಂಥ ಕ್ರಮಗಳ ಅಗತ್ಯ ಇದೆ.
ಅಪಾಯಕಾರಿ ಪ್ರವಾಸಿ ತಾಣಗಳಲ್ಲಿ ಫೋಟೋ, ಸೆಲ್ಫಿ ತೆಗೆಯುತ್ತಾರೆ. ಅಂಥ ಜಾಗಗಳಲ್ಲಿ ನಿಷೇಧ ಹೇರಲಾಗಿದೆ. 8 ಬೀಚ್ಗಳಲ್ಲಿ 24 ಜನ ಹೋಂ ಗಾರ್ಡ್ಸ್ಗಳನ್ನ ನೇಮಿಸಿದ್ದೇವೆ. ಟ್ರೆಕ್ಕಿಂಗ್ ಪಾಯಿಂಟ್, ಕುಕ್ಕೆ ಬಳಿಯ ಕಾಡು ಪ್ರದೇಶ ಕೂಡ ನಿಷೇಧಿಸಿದ್ದು, ಇದನ್ನ ಮೀರಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕಾಲು ಸಂಕ, ಸೇತುವೆ ಬಿರುಕು ಬಿಟ್ಟ ಜಾಗಗಳಲ್ಲಿ ಅಪಾಯ ಇದ್ದು, ಅಲ್ಲಿ ಜನ ಸಂಚಾರ ನಿಷೇಧದ ಫಲಕ ಅಳವಡಿಸಲು ಸೂಚಿಸಿದ್ದೇವೆ. ರೆಡ್ ಅಲರ್ಟ್ ಸಮಯದಲ್ಲಿ ಹೆಚ್ಚು ಗಮನ ಹರಿಲಾಗುವುದು ಎಂದರು.