ಮಂಗಳೂರು: ನಗರದ ರಥಬೀದಿಯ ಮತ್ತು ಫಳ್ನೀರ್‌ನ ಅಂಗಡಿಯಲ್ಲಿ ಸುಮಾರು 100 ಕೆ.ಜಿ ಯಷ್ಟು ಮಾದಕ ವಸ್ತು ಮಿಶ್ರಿತ ಚಾಕಲೇಟ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗುರುವಾರವೂ ಪೊಲೀಸರು ಹಲವು ಅಂಗಡಿಗಳಿಗೆ ದಾಳಿ ನಡೆಸಿದ್ದಾರೆ.
ನಗರದ ಬಂದರು, ರಥಬೀದಿ ಸೇರಿದಂತೆ ಸುತ್ತಮುತ್ತಲ ಪ್ರದೇಶದ 60ಕ್ಕೂ ಅಧಿಕ ಅಂಗಡಿಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ಮಿಶ್ರಿತ ಚಾಕಲೇಟ್ ಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.
ಈ ವೇಳೆ ನಗರದ ರಥಬೀದಿ ಮತ್ತು ಫಳ್ನೀರ್ ಗೂಡಂಗಡಿಯಲ್ಲಿ 100 ಕೆಜಿ ಮಾದಕ ವಸ್ತು ಮಿಶ್ರಿತ ಚಾಕಲೇಟ್ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಚಾಕ್‌ಲೇಟ್‌ಗಳನ್ನು ಉತ್ತರ ಭಾರತದಿಂದ ತರಿಸಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಚಾಕ್‌ಲೆಟ್‌ನಲ್ಲಿ ಒಳಗೊಂಡಿರುವ ಅಂಶವನ್ನು ಪತ್ತೆಹಚ್ಚುವ ಸಲುವಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮಾದಕ ವಸ್ತು ಮಿಶ್ರಿತ ಚಾಕಲೇಟ್ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.