ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿಗುತ್ತು ಶ್ರೀ ಉಳ್ಳಾಲ್ತಿ, ಬೆಮ್ಮೆರ್, ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ಧರ್ಮಚಾವಡಿಯ ಜೀರ್ಣೋದ್ಧಾರ ಕಾರ್ಯವು ಅತ್ಯಂತ ಪ್ರಗತಿಯಿಂದ ನಡೆಯುತ್ತಿದ್ದು, ಆ ಪ್ರಯುಕ್ತ ಜೀರ್ಣೋದ್ಧಾರ ಸಮಿತಿಯ ವತಿಯಿಂದ ಮನೆಮನೆ ಭೇಟಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿದೆ.
ಮಾಣಿ ಮತ್ತು ಅರೆಬೆಟ್ಟುವಿನಲ್ಲಿ ಒಟ್ಟು ಏಳು ಬೈಲುವಾರು ಸಮಿತಿಗಳನ್ನು ರಚಿಸಲಾಗಿದ್ದು, ಮಾಣಿಗುತ್ತು ಚಾವಡಿಯಲ್ಲಿ ಪ್ರಮುಖರು ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ಮನೆಮನೆ ಭೇಟಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ವಿಜ್ಞಾಪನಾ ಪತ್ರ ಮತ್ತು ಪ್ರಸಾದವನ್ನು ಪ್ರತೀ ಮನೆಗೆ ನೀಡುವುದರ ಜೊತೆಗೆ ಮನೆಯ ಬಾಗಿಲಿಗೆ ಜೀರ್ಣೋದ್ಧಾರದ ಸಂಬಂಧ ಸ್ಟಿಕ್ಕರ್ ಅಂಟಿಸುವ ಕಾರ್ಯ ಮನೆಮನೆ ಭೇಟಿಯ ಸಂದರ್ಭದಲ್ಲಿ ನಡೆಯುತ್ತದೆ.
ಮುಂದಿನ ಜನವರಿ ತಿಂಗಳಿನಲ್ಲಿ ಧರ್ಮಚಾವಡಿಯ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿಯಾಗಿದ್ದು, ಜೀರ್ಣೋದ್ಧಾರ ಕಾರ್ಯ ಶೀಘ್ರವಾಗಿ ನಡೆಯಬೇಕು ಮತ್ತು ಗ್ರಾಮಸ್ಥರು ಈ ಪುಣ್ಯ ಕಾರ್ಯದಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಮನೆಮನೆ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮನೆಮನೆ ಭೇಟಿ ಕಾರ್ಯಕ್ರಮಕ್ಕೆ ಗ್ರಾಮದಲ್ಲಿ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ.