ಬಿ.ಸಿ.ರೋಡ್ ನಲ್ಲಿರುವ ಪುರಸಭೆಯ ವಾಣಿಜ್ಯ ಸಂಕೀರ್ಣದ ಮುಂಭಾಗ ಖಾಸಗಿ ಬಸ್ಸುಗಳು ತಂಗುತ್ತವೆ. ಇದಕ್ಕೆ ಖಾಸಗಿ ಬಸ್ ನಿಲ್ದಾಣವೆನ್ನುತ್ತಾರೆ. ಪ್ರಯಾಣಿಕರು ವಾಣಿಜ್ಯ ಕೇಂದ್ರದ ಅಂಗಡಿಗಳ ಮುಂಭಾಗದ ಪ್ಯಾಸೇಜ್ ನಲ್ಲಿ ನಿಲ್ಲುತ್ತಾರೆ. ಖಾಲಿ ಬಿಟ್ಟ ಕೋಣೆಯಲ್ಲಿ ಸೊಳ್ಳೆಗಳ ಸಾಮ್ರಾಜ್ಯ. ಅದು ಒಂದು ಭಾಗವಾದರೆ, ಇನ್ನೊಂದು ಸಮಸ್ಯೆ ಈ ಸಂಕೀರ್ಣದ ಹಿಂದೆ ಮತ್ತೊಂದು ವಾಣಿಜ್ಯ ಸಂಕೀರ್ಣವಿದೆ. ಇವೆರಡರ ಮಧ್ಯೆ ರಸ್ತೆಯೂ ಇದೆ. ಇಲ್ಲಿನ ಮಳಿಗೆಗಳಿಗೆ ನೂರಾರು ಮಂದಿ ನಿತ್ಯ ಓಡಾಡುತ್ತಾರೆ. ಆದರೆ ವರ್ಷದ 365 ದಿನವೂ ಪ್ರಖರ ಬೆಳಕು ಇಲ್ಲದ ಈ ಓಣಿಯಂಥ ರಸ್ತೆಯಲ್ಲಿ ಮಳೆ ಬಂದರೆ ಮೇಲೆ ವಾಣಿಜ್ಯ ಸಂಕೀರ್ಣದಲ್ಲಿ ನೀರು ತುಂಬಿದರೆ, ಕೇಳುವುದೇ ಬೇಡ. ನೀರು ಧಾರೆಯಂತೆ ಕೆಳಗೆ ಬೀಳುತ್ತದೆ. ಕೊಡೆ ಇಲ್ಲದಿದ್ದರೆ ನಡೆದುಕೊಂಡು ಹೋಗುವವನ ತಲೆ ಮೇಲೆ ಬೀಳುವುದು ಗ್ಯಾರಂಟಿ. ಇಂಥ ಸನ್ನಿವೇಶ ಇಂದು ಇಲ್ಲಿ ನಿರ್ಮಾಣವಾಯಿತು. ಈ ವಾಣಿಜ್ಯ ಸಂಕೀರ್ಣದ ಮೇಲ್ಭಾಗದಲ್ಲಿ ಸ್ವಿಮ್ಮಿಂಗ್ ಪೂಲ್ ನಂತೆ ನೀರು ತುಂಬಿಕೊಂಡಿದ್ದು, ಅಲ್ಲಿಂದ ಹೊರಚೆಲ್ಲಿದ ನೀರು ಯಾವುದೇ ಡ್ಯಾಂ ನಿಂದ ಹೊರಬೀಳುವ ನೀರಿನಂತೆ ಕಂಡುಬಂತು. ಸ್ಥಳೀಯ ವರ್ತಕರು, ಸಾರ್ವಜಕರು ಇದರಿಂದ ತೊಂದರೆಗೆ ಒಳಗಾಗಿದ್ದು, ಸುದ್ದಿ ಮಾಧ್ಯಮಗಳಿಗೆ ತಮ್ಮ ಅಳಲು ತೋಡಿಕೊಂಡರು