ಬಂಟ್ವಾಳ: ದಿನಸಿ, ಡ್ರೆಸ್ & ಫ್ಯಾನ್ಸಿ ಅಂಗಡಿಗೆ ನುಗ್ಗಿದ ಕಳ್ಳರು ನಗದು ಸಹಿತ ಇತರ ಸ್ವತ್ತುಗಳನ್ನು ಕಳವು ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಬೆಂಜನಪದವು ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಬೆಂಜನಪದವು ಎಂಬಲ್ಲಿರುವ ಅಲ್ಬರ್ಟ್ ಫೆರ್ನಾಂಡೀಸ್ ಬಿಲ್ಡಿಂಗ್ ನಲ್ಲಿ ಸುರೇಶ್ ಎಂಬವರ ಪತ್ನಿ ನಮಿತಾ ಅವರು ರಾಜೇಶ್ವರಿ ದಿನಸಿ ಅಂಗಡಿ ಮತ್ತು ರಾಜರಾಜೇಶ್ವರಿ ಡ್ರೆಸ್ & ಫ್ಯಾನ್ಸಿ ಅಂಗಡಿಯನ್ನು ಇಟ್ಟುಕೊಂಡು ಸುಮಾರು 7 ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿದ್ದರು. ಆದ್ರೆ ನಮಿತಾ ಅವರು ಜು.22 ರಂದು ರಾತ್ರಿ 8 ಗಂಟೆಗೆ ಅಂಗಡಿ ಬಂದ್ ಮಾಡಿ ಹೋಗಿದ್ದು, ಮರುದಿನ ಬೆಳಿಗ್ಗೆ 6 ಗಂಟೆಗೆ ಪರಿಚಯದ ವಸಂತರವರು ಕರೆ ಮಾಡಿ ಅಂಗಡಿಯ ಶಟರ್ ಅರ್ಧ ತೆರೆದಿರುವ ಬಗ್ಗೆ ಮಾಹಿತಿ ನೀಡಿದ್ದು, ಕೂಡಲೇ ತನ್ನ ಮಗಳೊಂದಿಗೆ ಅಂಗಡಿಗೆ ಬಂದು ನೋಡಿದಾಗ ಅಂಗಡಿಯಲ್ಲಿ ಕಳವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಇನ್ನು ರಾಜರಾಜೇಶ್ವರಿ ದಿನಸಿ ಅಂಗಡಿಯ ಶಟರ್ ನ್ನು ಕಬ್ಬಿಣದ ಸಾಧನದಿಂದ ಮೇಲಕ್ಕೆತ್ತಿ ಅಂಗಡಿಯ ಒಳಗಿದ್ದ ಬಿಸ್ಕಿಟ್ ಪ್ಯಾಕೇಟ್, ಸಿಗರೇಟ್ ಪ್ಯಾಕೇಟ್, ಕ್ಯಾಶ್ ಡ್ರಾವರ್ ನ ಬೀಗವನ್ನು ಮುರಿದು ಅದರಲ್ಲಿದ್ದ ನಗದು 1500ರೂ ಕಳವು ಮಾಡಿದ್ದಲ್ಲದೇ ರಾಜರಾಜೇಶ್ವರಿ ಡ್ರೆಸ್ & ಫ್ಯಾನ್ಸಿ ಸ್ಟೋರ್ ನ ಶಟರಿನ ಬೀಗ ಮುರಿದು ಅದರೊಳಗಿದ್ದ ಸುಮಾರು 10,000 ರೂಪಾಯಿ ಮೌಲ್ಯದ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್, 5000ರೂ. ಮೌಲ್ಯದ ಚಪ್ಪಲಿ ಹಾಗೂ ಕ್ಯಾಶ್ ಡ್ರಾವರ್ ನಲ್ಲಿದ್ದ ನಗದು 3500 ರೂ ಸ್ಟೀಲ್ ಕಾಣಿಕೆ ಡಬ್ಬದಲ್ಲಿದ್ದ ನಗದು 10,000 ರೂಪಾಯಿಗಳನ್ನು ಕಳವು ಮಾಡಿದ ಬಳಿಕ ಬಿಲ್ಡಿಂಗ್ ನ ಸ್ಟಾಕ್ ರೂಮ್ ನ ಅಂಗಡಿಯ ಶಟರಿನ ಬೀಗ ಮುರಿದು ಒಂದು ಪೈಂಟ್ ಡಬ್ಬಿಯನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಒಟ್ಟು 15,000 ರೂ. ಹಾಗೂ ಇತರ ಸಾಮಾಗ್ರಿಗಳ ಅಂದಾಜು ಮೊತ್ತ 18,500ರೂ. ಕಳವು ಮಾಡಿದ್ದು ಕಳವಾದ ಎಲ್ಲಾ ಸ್ವತ್ತುಗಳ ಅಂದಾಜು 33,500 ರೂ ಆಗಬಹುದು ಎಂದು ಅಂದಾಜಿಸಲಾಗಿದೆ.
ಇನ್ನು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.