ವಿಟ್ಲ: ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಮತದಾನ ನಡೆಯಿತು.
ವಿದ್ಯಾರ್ಥಿ ನಾಯಕ ಸ್ಥಾನಕ್ಕೆ ಮತ್ತು ವಿದ್ಯಾರ್ಥಿ ಉಪ ನಾಯಕ ಸ್ಥಾನಕ್ಕೆ ಹತ್ತನೇ ತರಗತಿಯ 7 ವಿದ್ಯಾರ್ಥಿಗಳು ಹಾಗೂ ಉಪ ನಾಯಕನ ಸ್ಥಾನಕ್ಕೆ ಏಳನೇ ತರಗತಿಯ 11 ವಿದ್ಯಾರ್ಥಿಗಳು ಕಣದಲ್ಲಿದ್ದರು. ನಾಮಪತ್ರ ಸಲ್ಲಿಕೆಗೆ ಚುನಾವಣಾ ಆಯೋಗದ ನಿರ್ಧಾರದಂತೆ ಪಠ್ಯ ಮತ್ತು ಇತರ ಚಟುವಟಿಕೆಗಳ ಅರ್ಹತೆಗಳ ಮೇಲೆ ಸಲ್ಲಿಸಬೇಕಾಗಿತ್ತು. ನಾಮಪತ್ರ ಹಿಂತೆಗೆತಗಳ ಪ್ರಕ್ರಿಯೆಗಳ ಬಳಿಕ ಪೂರ್ವಾಹ್ನ ನಾಮನಿರ್ದೇಶಿತ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಭಾಷಣ ನಡೆಯಿತು. ಮತದಾನದ ನಿಯಮಾವಳಿಗಳನ್ನು ಸಹ ಶಿಕ್ಷಕಿ ರೇಖಾ ತಿಳಿಸಿಕೊಟ್ಟರು .
ವಿದ್ಯಾರ್ಥಿಗಳಿಗೆ ಸೂಕ್ತ ನಾಯಕನನ್ನು ಪಾರದರ್ಶಕವಾಗಿ ಆಯ್ಕೆ ಮಾಡುವಂತೆ ಮತ್ತು ವಿದ್ಯಾರ್ಥಿ ಮತದಾನ ವಿದ್ಯಾರ್ಥಿಗಳ ಜವಬ್ದಾರಿ ಹೆಚ್ಚಿಸುತ್ತದೆ ಎಂದು ಪ್ರಾಂಶುಪಾಲರಾದ ಜಯರಾಮ ರೈ ರವರು ತಿಳಿಸಿದರು.
ಭಾರತದ ಸಂವಿಧಾನದ ಚುನಾವಣಾ ಪದ್ಧತಿಯಂತೆ, ಚುನಾವಣಾ ಆಯೋಗ, ಮತದಾನ ಕೇಂದ್ರ, ಗುರುತು ಚೀಟಿ, ಕೈಗೆ ಶಾಯಿ, ಮತದಾನ ಮಾಡುವ ಮೊಹರು, ಮತದಾನ ಚೀಟಿ, ಮತದಾನ ಪೆಟ್ಟಿಗೆ, ಮತ ಎಣಿಕೆ, ಮೊದಲಾದವುಗಳನ್ನು ಶಿಕ್ಷಕರೇ ನಿರ್ವಹಿಸಿ, ಪಾರದರ್ಶಕವಾಗಿ ಮಾಡುವುದರ ಮೂಲಕ ಮತದಾನದ ಕಾರ್ಯರೂಪವನ್ನು ವಿದ್ಯಾರ್ಥಿಗಳು ಅನುಭವಿಸಿದರು.
ಫಲಿತಾಂಶದಲ್ಲಿ ವಿದ್ಯಾರ್ಥಿ ನಾಯಕ ಸ್ಥಾನಕ್ಕೆ ಕುಮಾರಿ ಸೃಜನ ರೈ.ಎ ಹಾಗೂ ಉಪ ವಿದ್ಯಾರ್ಥಿ ನಾಯಕ ಸ್ಥಾನಕ್ಕೆ ವಂಧ್ಯಾ ಆಯ್ಕೆಗೊಂಡರು.
ಕಾರ್ಯಕ್ರಮದಲ್ಲಿ ಶಾಲೆಯ ಉಪ ಪ್ರಾಂಶುಪಾಲೆಯಾದ ಜ್ಯೋತಿ ಶೆಣೈ ಶಿಕ್ಷಕರಾದ ಗುರುವಪ್ಪ ನಾಯ್ಕ ಶಾಲಾ ದೈಹಿಕ ಶಿಕ್ಷಕರಾದ ಭಾನುಪ್ರಕಾಶ್, ಶಶಿಕಲಾ ರವರು ಶಿಸ್ತು ಮತ್ತು ಸಂಯಮದಿಂದ ಮತದಾನ ನಡೆಯುವಂತೆ ಸಹಕರಿಸಿದರು. ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಹ ಶಿಕ್ಷಕಿ ರಶ್ಮಿ ಕೆ. ಎನ್. ನಿರೂಪಿಸಿದರು.