ಸುಳ್ಯ: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ನಿಯಮ 2021ರ ಅನ್ವಯ ಜಾನುವಾರು ಸಾಗಾಟ ಮಾಡಲು ಪರವಾನಿಗೆ ಪಡೆಯಲು ಇನ್ನು ಮುಂದೆ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಧಿಕೃತ ಜಾನುವಾರು ಸಾಗಾಟ ಪರವಾನಿಗೆ ಜಾಲತಾಣದಿಂದ ರೈತರು ತಾವೇ ಅರ್ಜಿ ಗಳನ್ನು ಸಲ್ಲಿಸಿ ಕೆಲಸದ ದಿನಗಳಂದು ಪರವಾನಿಗೆ ಪಡೆದು ಕೊಳ್ಳಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
https://animaltrans.karahvs.in ವೆಬ್ ಸೈಟ್ ನಲ್ಲಿ ಈ ಕೆಳಗೆ ತಿಳಿಸಿದ ಜಾನುವಾರು ಸಾಗಾಣಿಕೆ ಪರವಾನಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..
ಈ ಲಿಂಕ್ ನಲ್ಲಿ ಜಾನುವಾರು ಮಾಲಕರು ಅಥವಾ ಸಾಗಾಟ ಮಾಡುವ ವಾಹನದ ಚಾಲಕರು ಅರ್ಜಿ ಸಲ್ಲಿಸಬೇಕು ಅಥವಾ ಈ ಕೆಳಗಿನ ದಾಖಲೆಗಳೊಂದಿಗೆ ಗ್ರಾಮ ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನಿಗದಿತ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಬಹುದು.
ವಾಹನ ಸಂಖ್ಯೆ ಮತ್ತು ಮಾಡೆಲ್, ವಾಹನದ ಮಾಲಕನ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ, ಚಾಲಕನ ಹೆಸರು, ವಿಳಾಸ ಮತ್ತು ಲೈಸನ್ಸ್ ಸಂಖ್ಯೆ, ವಾಹನದ ಫೋಟೋ, ವಾಹನದ ಆರ್‌ಸಿ ಫೋಟೋ, ಜಾನುವಾರು ಮಾರಾಟಗಾರರ ಹೆಸರು, ವಿಳಾಸ, ಇಮೈಲ್ ವಿವರ ಮತ್ತು ಮೊಬೈಲ್ ಸಂಖ್ಯೆ, ಜಾನುವಾರು ಮಾರಾಟಗಾರರ ಐಡಿ ಕಾರ್ಡ್ ಫೋಟೋ, ಜಾನುವಾರುವಿನ ಫೋಟೋ, ಜಾನುವಾರಿನ ಕಿವಿ ಓಲೆ ಸಂಖ್ಯೆ ಮತ್ತು ಲಸಿಕೆ ವಿವರ, ಜಾನುವಾರು ಖರೀದಿಸುವವರ ಹೆಸರು ಮತ್ತು ವಿಳಾಸ, ಸಾಗಾಟ ಮಾಡುವ ದಿನಾಂಕ, ಸಾಗಾಟದ ಅವಧಿ ಮತ್ತು ಮಾರ್ಗ ಈ ಎಲ್ಲ ದಾಖಲೆಗಳನ್ನು ಹೊಂದಿರುವ ಅರ್ಜಿಗಳನ್ನು ಜಾನುವಾರುವಿನ ಪರಿಶೀಲನೆಯ (ಪಶುವೈದ್ಯರಿಂದ ಜಾನುವಾರು ಪರಿಶೀಲನೆ ಕಡ್ಡಾಯ) ಅನಂತರ ಮಾನ್ಯ ಮಾಡಿ ಪರವಾನಿಗೆಯನ್ನು ಆಯಾ ಸಂಸ್ಥೆಗಳಲ್ಲಿ ನೀಡಲಾಗುವುದು ಎಂದು ಸುಳ್ಯ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜಾನುವಾರು ಸಾಗಣೆದಾರರು ಅರ್ಜಿ ಸಲ್ಲಿಸುವ ವಿಧಾನ :
1. https://animaltrans.karahvs.in ವೆಬ್ ಸೈಟ್ ನಲ್ಲಿ ಜಾನುವಾರು ಸಾಗಣೆಗೆದಾರರು ಅರ್ಜಿ ಸಲ್ಲಿಸಲು “ಜಾನುವಾರು ಸಾಗಣೆ ಪರವಾನಿಗೆ” ಆಯ್ಕೆ ಮಾಡಬೇಕು (ಅರ್ಜಿ ಸಲ್ಲಿಸುವಾಗ ಜಾನುವಾರು/ಗಳ ಫೋಟೋ , ಜಾನುವಾರು ಮಾಲಕರ ಭಾವಚಿತ್ರ ಇರುವ ಯಾವುದಾದರೊಂದು ಗುರುತಿನ ಚೀಟಿ, ಜಾನುವಾರುಗಳ ಕಿವಿಯೋಲೆ ಸಂಖ್ಯೆ, ಸಾಗಾಟ ಮಾಡಲು ಬಳಸುವ ವಾಹನದ ಫೋಟೋ, ವಾಹನದ ಆರ್. ಸಿ ಪ್ರತಿ ಮೊಬೈಲ್ /ಕಂಪ್ಯೂಟರ್ ನಲ್ಲಿ ಸಿದ್ದವಾಗಿ ಇಟ್ಟುಕೊಳ್ಳಿ)
2. ಅರ್ಜಿದಾರರ ಮೊಬೈಲ್ ಸಂಖ್ಯೆ ನಮೂದಿಸಿ , OTP ನಮೂದಿಸಿ ಅರ್ಜಿಯಲ್ಲಿ ಕೇಳಲಾದ ಸಾಗಾಟದ ಉದ್ದೇಶ,ಸಾಗಾಟ ವಾಹನದ ಮಾಹಿತಿ,ಜಾನುವಾರು ಮಾಲೀಕರ ವಿವರ,ಜಾನುವಾರು ವಿವರ, ಸಾಗಾಟ ಮಾರ್ಗ, ತಲುಪುವ ಸ್ಥಳ ಹಾಗೂ ವ್ಯಕ್ತಿಯ ಹೆಸರು ಮತ್ತು ವಿಳಾಸ ವನ್ನು ನಮೂದಿಸಬೇಕು. ( ಅರ್ಜಿ ಸಲ್ಲಿಸುವಾಗ ನಿಮ್ಮ ವಾಹನ ಸಂಖ್ಯೆ ಆಯ್ಕೆ ಪಟ್ಟಿಯಲ್ಲಿ ಇಲ್ಲವಾದಲ್ಲಿ ಒಂದು ಬಾರಿ ವಾಹನದ ವಿವರ , ಆರ್.ಸಿ ಪ್ರತಿ ಮತ್ತು ವಾಹನದ ಫೋಟೋ ವನ್ನು ಸೇರಿಸಿ).
3. ಅರ್ಜಿ ಸಲ್ಲಿಸಿದಾಗ ಸಾಗಾಟ ವಾಹನವು ತಲುಪುವ ಸ್ಥಳವು 15 ಕಿಲೋ ಮೀಟರ್ ಗಿಂತ ಕಡಿಮೆ ಇದ್ದಲ್ಲಿ ಯಾವುದೇ ಶುಲ್ಕವು ಅನ್ವಯಿಸುವುದಿಲ್ಲ . 15 ಕಿ. ಲೋ ಮೀಟರ್ ಗಿಂದ ಹೆಚ್ಚು ಇದ್ದಲ್ಲಿ ಲಘು ವಾಹನಕ್ಕೆ ರೂಪಾಯಿ 25.00 ಮತ್ತು ಘನ ವಾಹನಕ್ಕೆ ರೂಪಾಯಿ 50.00 ಹಾಗೂ ಸದರಿ ಸೇವಾ ಶುಲ್ಕಕ್ಕೆ ತಗಲುವ ಜಿ. ಎಸ್. ಟಿ ಸೇರಿಸಿ ಒಟ್ಟು ಮೊತ್ತವನ್ನು ಆನ್ ಲೈನ್ ಪೇಮೆಂಟ್ ಮೂಲಕ ಪಾವತಿ ಮಾಡಬಹುದಾಗಿದೆ. (UPI, Credit, Debit Card, net banking ವಿಧಾನ ಲಭ್ಯವಿದೆ).
4. ಶುಲ್ಕ ಪಾವತಿಯಾದ ನಂತರ ಪ್ರದೇಶದ ಪಶುವೈದ್ಯಾಧಿಕಾರಿ ಹೆಸರು ಮತ್ತು ಮೊಬೈಲ್ ಸಂಖ್ಯೆ ವಿವರವನ್ನು ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವುದು ಹಾಗೂ ವ್ಯಾಪ್ತಿ ಪ್ರದೇಶದ ಪಶುವೈದ್ಯಾಧಿಕಾರಿಯ ಮೊಬೈಲ್ ಸಂಖ್ಯೆಗೆ ಕೂಡ ಅರ್ಜಿ ಸಲ್ಲಿಕೆಯ ಬಗ್ಗೆ (SMS) ಸಂದೇಶ ರವಾನಿಸಲಾಗುವುದು.
5. ಜಾನುವಾರು ಇರುವ ವ್ಯಾಪ್ತಿ ಪ್ರದೇಶದ ಪಶುವೈದ್ಯಾಧಿಕಾರಿಗಳು ಜಾನುವಾರು/ಗಳ ತಪಾಸಣೆ ನಡೆಸಿ ಸಾಗಾಟ ಮಾಡಲು ತಂತ್ರಾಂಶದ ಮೂಲಕ ಅನುಮತಿ ಅಥವಾ ನಿರಾಕರಣೆ ಸೂಚಿಸುತ್ತಾರೆ.
6. ಪರವಾನಿಗೆಗಾಗಿ ಸಲ್ಲಿಸಿದ ಅರ್ಜಿಗಳ ಅನುಮೋದನೆ ಅಥವಾ ನಿರಾಕರಣೆ ಬಗ್ಗೆ ಅರ್ಜಿದಾರರ ಮೊಬೈಲ್ ಸಂಖ್ಯೆಗೆ (SMS) ಮುಖಾಂತರ ಸಂದೇಶ ರವಾನಿಸಲಾಗುವುದು.
7. ಮೊಬೈಲ್ ಸಂದೇಶದಲ್ಲಿ ಬಂದಿರುವ ಅನುಮೋದಿತ ಪರವಾನಿಗೆಯನ್ನು ಅಲ್ಲೇ ಡೌನ್ ಲೋಡ್ ಮಾಡಿ ಕೊಳ್ಳಬಹುದು ಮತ್ತು ಪ್ರಿಂಟ್ ಕೂಡ ಮಾಡಿಸಿಕೊಳ್ಳಬಹುದು
8. ಅರ್ಜಿಯನ್ನು ಪಶುವೈದ್ಯಾಧಿಕಾರಿಗಳು ಕಾರಣ ನೀಡಿ ನಿರಾಕರಿಸಿದಲ್ಲಿ ಅರ್ಜಿದಾರರು ಪುನಃ ಅರ್ಜಿಯನ್ನು ಸರಿ ಪಡಿಸಿಕೊಂಡು ಮರು ಅರ್ಜಿ ಸಲ್ಲಿಸಬಹುದಾಗಿದೆ.