ಮಂಗಳೂರು: ಅಪ್ರಾಪ್ತ ವಯಸ್ಸಿನ ಮಲಮಗಳನ್ನು ಅತ್ಯಾಚಾರಗೈದ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ಪೊಕ್ಸೊ ನ್ಯಾಯಾಲಯವು ಆರೋಪಿ ಮಲತಂದೆಗೆ 20 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಅಶ್ವತ್ಥ್ ಶಿಕ್ಷೆಗೊಳಗಾದ ಆರೋಪಿ.
ಈತ ತನ್ನ ಪತ್ನಿಯ ಮೊದಲ ಪತಿಯ ಅಪ್ರಾಪ್ತ ವಯಸ್ಸಿನ ಮಗಳನ್ನು 2022ರ ಜುಲೈ 26ರಂದು ಪತ್ನಿ ಹೆರಿಗೆ ಹೋಗಿದ್ದ ವೇಳೆ ಅತ್ಯಾಚಾರಗೈದಿರುವ ಬಗ್ಗೆ ಬಾಲಕಿಯ ದೊಡ್ಡಮ್ಮ ಪೊಲೀಸರಿಗೆ ದೂರು ನೀಡಿದ್ದರು.
ಈ ವಿಷಯವನ್ನು ಯಾರಲ್ಲಾದರೂ ಬಾಯಿ ಬಿಟ್ಟರೆ ಕೊಲ್ಲುವುದಾಗಿ ಬಾಲಕಿಯನ್ನು ಬೆದರಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಇನ್ನು ಆರೋಪಿಯ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ಪೊಕ್ಸೊ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ 20 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.