ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ ಇಲ್ಲಿನ ಶಾಲಾ ಪ್ರಾರಂಭೋತ್ಸವವು ನೆಟ್ಲ ದೇವಸ್ಥಾನ ಬಲಿಯಿಂದ ಮೆರವಣಿಗೆ ಮೂಲಕ ಮಕ್ಕಳನ್ನು ಶಾಲೆಗೆ ಕರೆತಂದು ಮಕ್ಕಳಿಗೆ ಗುಲಾಬಿ ಹೂ ಮತ್ತು ಸಿಹಿತಿಂಡಿಯನ್ನು ಕೊಟ್ಟು ಶಾಲೆಗೆ ಆತ್ಮೀಯವಾಗಿ ಸ್ವಾಗತಿಸಲಾಯಿತು.
ನಂತರ ಹೊಸದಾಗಿ ಸೇರಿದ ಮಕ್ಕಳ ಪರವಾಗಿ ಶಾಲಾ ಆವರಣದಲ್ಲಿ ಗಿಡವನ್ನು ನೆಟ್ಟು ಸಭಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ರಾಮಚಂದ್ರ ಬನ್ನಿಂತಾಯರು ದಾನಿಗಳಾದ ಪ್ರಸನ್ನ ಕುಮಾರ್ ಉಚಿತವಾಗಿ ನೀಡಿರುವ ನೋಟ್ಸ್ ಪುಸ್ತಕವನ್ನು ವಿತರಣೆ ಮಾಡಿ ಮಕ್ಕಳು ಮುಂದಿನ ಬಾಳು ಉಜ್ವಲವಾಗಲಿ ಎಂಬುದಾಗಿ ಹಾರೈಸಿದರು.
ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಭಾಸ್ಕರ್ ಕುಲಾಲ್, ಗ್ರಾಮ ಪಂಚಾಯತಿನ ಸದಸ್ಯರಾದಂತಹ ಸವಿತ ಮತ್ತು ಹರಿಣಾಕ್ಷಿ, ಪತಂಜಲಿ ಯೋಗ ಗುರುಗಳಾದ ಸರಸ್ವತಿ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಸುರೇಶ್ ಕುಲಾಲ್ ಪಿಲಿಂಜ, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಸರಕಾರದಿಂದ ನೀಡಲ್ಪಟ್ಟ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ಹಾಗೂ ದತ್ತಿ ನಿಧಿಯಿಂದ ಕೆಲವು ಮಕ್ಕಳಿಗೆ ಬ್ಯಾಗನ್ನು ವಿತರಿಸಲಾಯಿತು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶೋಭಲತಾ ಬಿ ಸ್ವಾಗತಿಸಿ, ಶಿಕ್ಷಕ ಪ್ರವೀಣ್ ವಂದಿಸಿದರು, ಜಯರಾಮ್ ನಾವಡ ಕಾರ್ಯಕ್ರಮ ನಿರೂಪಿಸಿದರು.