Sunday, April 14, 2024

ಜಾತಿ, ಧರ್ಮದ ನಡುವೆ ವಿಷಬೀಜ ಬಿತ್ತಿ ಸುಳ್ಳು ಹಬ್ಬಿಸುವ ಬಿಜೆಪಿಗೆ ತಕ್ಕ ಪಾಠ ಕಲಿಸಿ : ರಮಾನಾಥ ರೈ

ಬಂಟ್ವಾಳ : ಸಮಾಜದಲ್ಲಿ ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತಿ ದ್ವೇಷ ರಾಜಕಾರಣ ಮಾಡುವ ಬಿಜೆಪಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಕರೆ ನೀಡಿದರು.

ಅವರು ಬಿ.ಸಿ.ರೋಡ್ ಪರ್ಲಿಯಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು. ಕಳೆದ ಐದು ವರ್ಷದಲ್ಲಿ ಬಂಟ್ವಾಳ ಶಾಂತವಾಗಿದೆ ಎಂದು ಬಿಜೆಪಿಗರು ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಅವಧಿಯಲ್ಲಿ ಬಂಟ್ವಾಳದ ನೆಮ್ಮದಿ ಕೆಡಿಸಿದವರೇ ಬಿಜೆಪಿಯವರು. ನಮ್ಮ ಅವಧಿಯಲ್ಲಿ ಚುನಾವಣೆಗೂ ಆರು ತಿಂಗಳಿರುವಾಗ ಗಲಭೆಗಳ ಸಂಚು ರೂಪಿಸಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಿದ್ದರು. ಕೊಲೆ ಪ್ರಕರಣವೊಂದನ್ನು ಕಾಂಗ್ರೆಸ್ ನಾಯಕರ ತಲೆಗೆ ಕಟ್ಟಲು ನೋಡಿದ್ದರು. ಆದರೆ, ನಾಲ್ಕೇ ದಿನದಲ್ಲಿ ಆರೋಪಿಗಳು ಪತ್ತೆಯಾದಾಗ ಅವರು ಯಾರು ಆಗಿದ್ದರು ಎಂಬುದು ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಅವರು ಸ್ಮರಿಸಿದರು.
ಕಳೆದ ಐದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದಿರುವ ಇವರಿಗೆ ಮಾತನಾಡಲು ವಿಷಯಗಳು ಸಿಗುತ್ತಿಲ್ಲ. ಅದಕ್ಕೆ ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದೆ. ನನ್ನ ನಾಮಪತ್ರ ಸಲ್ಲಿಕೆಗೆ ಮಂಜೇಶ್ವರದ ಶಾಸಕ ಆಗಮಿಸಿದ್ದಕ್ಕೆ ಬೇರೆ ಬಣ್ಣ ಕಟ್ಟಲು ನೋಡುತ್ತಿದ್ದಾರೆ. ಮಂಜೇಶ್ವರದ ಶಾಸಕ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಶಾಸಕರಾಗಿದ್ದು, ನನ್ನ ಮೇಲಿನ ಅಭಿಮಾನದಿಂದ ನಾಮಪತ್ರ ಸಲ್ಲಿಕೆಗೆ ಶುಭಕೋರಲು ಬಂದಿದ್ದರು. ಆದರೆ, ಬಿಜೆಪಿಗರು ಅದಕ್ಕೆ ಬೇರೆಯದೇ ಅರ್ಥ ಕಲ್ಪಿಸಿ, ಜನತೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಜನತೆ ಬಿಜೆಪಿಯ ಬಂಡವಾಳವನ್ನು ಅರಿತಿದ್ದು, ವಾಮಮಾರ್ಗದಿಂದ ಅಧಿಕಾರ ಹಿಡಿಯಬಹುದು ಎಂಬ ಇವರ ಕನಸು ನುಚ್ಚುನೂರಾಗಲಿದೆ ಎಂದು ರೈ ಭವಿಷ್ಯ ನುಡಿದರು.

ಭ್ರಷ್ಟ ಬಿಜೆಪಿ ತೊಲಗಿಸಿ : ಅಶ್ವನಿ ಕುಮಾರ್ ರೈ
ಬಿಜೆಪಿ ಆಡಳಿತದಲ್ಲಿ ಶೇ.40ರಷ್ಟು ಕಮಿಷನ್ ದಂಧೆ ನಡೆಯುತ್ತಿದ್ದ ಬಗ್ಗೆ ಗುತ್ತಿಗೆದಾರರು ಆಪಾದಿಸಿದ್ದುದನ್ನು ನಾವು ಕೇಳಿದ್ದೇವೆ. ಮುಖ್ಯಮಂತ್ರಿ ಕುರ್ಚಿ ಕೂಡ ಮಾರಾಟಕ್ಕಿದೆ ಎಂಬರ್ಥದಲ್ಲಿ ಸ್ವತಃ ಬಿಜೆಪಿ ಹಿರಿಯ ನಾಯಕರೇ ಆಪಾದಿಸಿದ್ದರು. ಇವತ್ತು ತಾಲೂಕು ಕಚೇರಿ ವರೆಗೂ ಭ್ರಷ್ಟಾಚಾರ ವ್ಯಾಪಿಸಿದೆ. ಕಾಂಗ್ರೆಸ್ ಆಡಳಿತದಲ್ಲಿ ಬಂಟ್ವಾಳದ ತಾಲೂಕು ಕಚೇರಿ ಭ್ರಷ್ಟಾಚಾರ ಮುಕ್ತವಾಗಿತ್ತು. ಆದರೆ, ಬಿಜೆಪಿ ಅವಧಿಯಲ್ಲಿ ಲೋಕಾಯುಕ್ತ ದಾಳಿ ನಡೆಯಿತು. ಈ ವೇಳೆ ಕಚೇರಿಯಲ್ಲಿ ಕೆಲವು ಕಡತಗಳು ನಾಪತ್ತೆಯಾಗಿದ್ದ ಬಗ್ಗೆ ಕೇಳಿಬಂದಿದ್ದವು. ಹೀಗೆ, ವಿವಿಧ ಹಂತದಲ್ಲಿ ಭ್ರಷ್ಟಾಚಾರ ಮಿತಿ ಮೀರಿರುವುದರಿಂದ ಭ್ರಷ್ಟ ಬಿಜೆಪಿಯನ್ನು ತೊಲಗಿಸಬೇಕು ಎಂದು ಖ್ಯಾತ ನ್ಯಾಯವಾದಿ, ಕೆಪಿಸಿಸಿ ಮುಖಂಡ ಅಶ್ವನಿ ಕುಮಾರ್ ರೈ ಹೇಳಿದರು. ಅವರು ಇದೇ ವೇಳೆ ಮಾತನಾಡಿದರು.

ರಮಾನಾಥ ರೈಯವರು ನಿಸ್ವಾರ್ಥ ಜನಸೇವಕ. ಅವರು ಸಚಿವರಾಗಿದ್ದಾಗಲೂ ಅಧಿವೇಶನವಿದ್ದರೆ ಮಾತ್ರ ಬೆಂಗಳೂರಿನಲ್ಲಿರುತ್ತಿದ್ದರು. ವಾರಾಂತ್ಯದಲ್ಲಿ ಊರಿಗೆ ಬಂದು ತಮ್ಮ ಕ್ಷೇತ್ರದ ಜನರ ನಡುವೆ ಇರುತ್ತಿದ್ದರು. ದೊಡ್ಡ ಕುಟುಂಬದ ಹಿನ್ನೆಲೆಯಿಂದ ಬಂದಿದ್ದರೂ, ಬಡವರ ಸೇವೆಗಾಗಿ ಐಶಾರಾಮಿ ಜೀವನವನ್ನು ತ್ಯಜಿಸಿದವರು. ಶಾಸಕ, ಸಚಿವನಾದರೂ ಬೆಂಗಳೂರು, ಮಂಗಳೂರು, ಬಿ.ಸಿ.ರೋಡ್ ನಲ್ಲಾಗಲೀ ಒಂದೇ ಒಂದು ಮನೆ ಕಟ್ಟಿಲ್ಲ. ತನ್ನ ಹಿರಿಯರು ನೀಡಿದ ಮನೆಯಲ್ಲಿ, ಮನೆಗೆ ಬಂದವರನ್ನೆಲ್ಲಾ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸೇವೆ ಮಾಡಿಕೊಂಡು ಬಂದಿದ್ದಾರೆ. ಇಂತಹ ನಾಯಕನಿಗೆ ಮತ್ತೊಮ್ಮೆ ಅಧಿಕಾರ ನೀಡುವ ಮೂಲಕ ಅವರ ಕೊನೆಯ ಚುನಾವಣೆಯಲ್ಲಿ ಗೌರವಪೂರ್ಣ ಫಲಿತಾಂಶ ನೀಡುವುದು ನಮ್ಮೆಲ್ಲರ ಹೊಣೆ ಎಂದು ಅಶ್ವನಿ ಕುಮಾರ್ ರೈ ತಿಳಿಸಿದರು.

ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಬ್ಲಾಕ್ ಅಧ್ಯಕ್ಷರುಗಳಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಪ್ರಮುಖರುಗಳಾದ ಬಿ.ಎಚ್. ಖಾದರ್, ಶಾಹುಲ್ ಹಮೀದ್, ಪದ್ಮಶೇಖರ ಜೈನ್, ಲುಕ್ಮಾನ್ ಬಂಟ್ವಾಳ, ಅಬ್ಬಾಸ್ ಅಲಿ, ಚಂದ್ರಶೇಖರ ಪೂಜಾರಿ, ಪ್ರವೀಣ್ ಬಂಟ್ವಾಳ್, ಪಿ.ಎ. ರಹೀಂ, ಶಬೀರ್ ಸಿದ್ದಕಟ್ಟೆ, ಹರ್ಷಾದ್, ಚಿತ್ತರಂಜನ್ ಶೆಟ್ಟಿ, ಇಬ್ರಾಹೀಂ ಕೊಡಂಗೆ, ಫಕ್ರುದ್ದೀನ್, ಬಿ. ಮೋಹನ್, ಮಹಮ್ಮದ್ ನಂದರಬೆಟ್ಟು, ಉಮೇಶ್ ಸಪಲ್ಯ, ಬಿ.ಎಸ್. ಅಬ್ದುಲ್ ಹಮೀದ್, ಮುಹಮ್ಮದ್ ಸಾಗರ ಮತ್ತಿತರರು ಉಪಸ್ಥಿತರಿದ್ದರು.

More from the blog

ಲೋಕಸಭಾ ಚುನಾವಣೆ : ಮತಯಂತ್ರಗಳ ಕಮಿಷನಿಂಗ್‌ ಕಾರ್ಯ…. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಬಂಟ್ವಾಳ :ಮೊಡಂಕಾಪಿನಲ್ಲಿರುವ ಇನ್ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ದಿನ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205 ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾಗುವ ಮತಯಂತ್ರಗಳ ಕಮಿಷನಿಂಗ್‌ ಕಾರ್ಯವು ನಡೆಯಿತು. ಈ ಸಂದರ್ಭದಲ್ಲಿ...

ಯುವಮೋರ್ಚಾ ಬಂಟ್ವಾಳ ವತಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಬಿ. ಸಿ ರೋಡಿನ ರಕ್ತೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ

ಯುವಮೋರ್ಚಾ ಬಂಟ್ವಾಳ ವತಿಯಿಂದ ನರೇಂದ್ರ ಮೋದಿ ಮತೊಮ್ಮೆ ಪ್ರಧಾನಿಯಾಗಲೆಂದು ರಕ್ತೇಶ್ವರಿ ದೇವಸ್ಥಾನ ಬಿ. ಸಿ ರೋಡಿನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಆಯತಪ್ಪಿ ಬಾವಿಗೆ‌ ಬಿದ್ದ ಮಹಿಳೆ… ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ

ಮಂಗಳೂರು: ಬಾವಿಯಿಂದ ನೀರು ಸೇದುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದ ಮಹಿಳೆಯೋರ್ವರನ್ನು ಗುರುವಾರ ಕದ್ರಿ ಅಗ್ನಿಶಾಮಕ ಠಾಣೆಯವರು ರಕ್ಷಿಸಿದ್ದಾರೆ ಬಿಕ್ಕರ್ನಕಟ್ಟೆ ಸಮೀಪದ ನಿವಾಸಿ ಟ್ರೆಸ್ಸಿ ಡಿಸೋಜಾ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟ ಮಹಿಳೆ. ಸಂಜೆ 5 ಗಂಟೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೆ..ಮಹಾರಥೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಎ. ೧೧ರಂದು ಸಂಜೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ...