ಬಂಟ್ವಾಳ: ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಗಣನೀಯ ಇಳಿಕೆಯಾದ ಪರಿಣಾಮ ಬಂಟ್ವಾಳ ನಗರ ವ್ಯಾಪ್ತಿಯಲ್ಲೂ ಕುಡಿಯುವ ನೀರಿನ ಆತಂಕ ಎದುರಾಗಿದ್ದು, ಮಳೆ ಬಂದರೂ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಾಗದ ಹಿನ್ನೆಲೆಯಲ್ಲಿ ಮುಂದೆ ನೀರಿನ ಅಭಾವ ಉಂಟಾಗುವ ಅಪಾಯವಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಹುತೇಕ ಪ್ರದೇಶಗಳಿಗೆ ನೇತ್ರಾವತಿ ನದಿಯಿಂದ ಜಕ್ರಿಬೆಟ್ಟಿನಲ್ಲಿ ಜಾಕ್‌ವೆಲ್ ಮೂಲಕ ನೀರನ್ನು ಲಿಫ್ಟ್ ಮಾಡಲಾಗುತ್ತಿದ್ದು, ಪ್ರಸ್ತುತ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾದ ಹಿನ್ನೆಲೆಯಲ್ಲಿ ನದಿಯಲ್ಲಿ ಅಲ್ಲಲ್ಲಿ ನಿಂತಿರುವ ನೀರನ್ನು ಜಾಕ್‌ವೆಲ್‌ನ ಬುಡಕ್ಕೆ ಹರಿಸುವ ಕಾರ್ಯ ಮಾಡಲಾಗಿದೆ.
ಪ್ರಸ್ತುತ ನದಿಯಲ್ಲಿ ಅಂತಿಮ ಹಂತದ ನೀರು ಲಭ್ಯವಿದ್ದು, ಇದೇ ಸ್ಥಿತಿ ಮುಂದುವರಿದರೆ ನದಿಯಲ್ಲಿ ನೀರು ಇನ್ನಷ್ಟು ಇಳಿಕೆಯಾಗಿ ಪೂರ್ತಿ ಬತ್ತಿ ಹೋಗುವ ಸಾಧ್ಯತೆ ಇದೆ. ಆದರೆ ಪ್ರಸ್ತುತ ಕೊಂಚ ಮಟ್ಟಿನ ಮಳೆಯಾಗುತ್ತಿರುವುದರಿಂದ ನದಿಯಲ್ಲಿ ಒಳಹರಿವು ಹೆಚ್ಚಳವಾಗುವ ಭರವಸೆ ಮೂಡಿಸಿದೆ. ಘಟ್ಟ ಪ್ರದೇಶದಲ್ಲಿ ಮಳೆಯಾದರೆ ಮಾತ್ರ ನೀರಿನ ಒಳಹರಿವು ಹೆಚ್ಚಳಗೊಳ್ಳುತ್ತದೆ.
ನದಿಯಲ್ಲಿ ನೀರು ಕಡಿಮೆಯಾದ ಪರಿಣಾಮ ಪುರಸಭೆಯು ತನ್ನ ವಿತರಣಾ ವ್ಯವಸ್ಥೆಯನ್ನೂ ಬದಲಿಸಿದ್ದು, ದಿನಕ್ಕೆ ಒಂದೇ ಬಾರಿ ಪೂರೈಕೆ ಮಾಡಲಾಗುತ್ತದೆ. ಈ ಹಿಂದೆ ಬಹುತೇಕ ಪ್ರದೇಶದಲ್ಲಿ ೨ ಬಾರಿ ನೀರು ಪೂರೈಕೆ ಮಾಡಲಾಗುತ್ತಿತ್ತು ಎಂದಿದೆ. ಜತೆಗೆ ನೀರನ್ನು ಮಿತವಾಗಿ ಬಳಸುವಂತೆಯೂ ವಿನಂತಿಸಿದ್ದು, ಮುಂದೆ ನೀರಿನ ವಿಚಾರದಲ್ಲಿ ಇನ್ನಷ್ಟು ಮಿತಿಗಳನ್ನು ಹೇರುವ ಸಾಧ್ಯತೆ ಇದೆ.