ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ ಮುಗಿದು ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಎಷ್ಟು ಸ್ಥಾನಗಳು ಸಿಗಲಿದೆ ಎಂಬ ಲೆಕ್ಕಾಚಾರಗಳು ಶುರುವಾಗಿದೆ.
ಮತದಾರರ ನಾಡಿಮಿಡಿತ ರಾಜಕೀಯ ಪಕ್ಷಗಳ ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಬಿಜೆಪಿ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳು ಲಭಿಸಲಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ತೆಕ್ಕೆಯಲ್ಲಿದ್ದ ಎರಡು ಸೀಟುಗಳು ಕೈ ಪಾಲಾಗುವ ಸಾಧ್ಯತೆಗಳು ಕೂಡ ಇವೆ ಎನ್ನಲಾಗುತ್ತಿದೆ.
ಒಂದು ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಬಿಜೆಪಿಗೆ ಐದು ಹಾಗೂ ಕಾಂಗ್ರೆಸ್ ಗೆ ಮೂರು ಸ್ಥಾನಗಳು ಲಭಿಸುವ ಬಹುತೇಕ ಲಕ್ಷಣಗಳಿವೆ ಎನ್ನಲಾಗಿದೆ. ಆದರೆ ಈ ಮೂರು ಕ್ಷೇತ್ರಗಳು ಅತ್ಯಂತ ಹೆಚ್ಚಿನ ಬಲಾಬಲ ಹೊಂದಿದೆ ಎನ್ನಲಾಗಿದೆ.
ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲದ ಹೋರಾಟದಲ್ಲಿದ್ದು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಅವಕಾಶ ಇದೆ. ಇಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಎಸ್.ಡಿ.ಪಿ.ಪ್ರಬಲ ಸ್ಪರ್ಧೆ ಇದ್ದದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿವೆ.
ಉಳ್ಳಾಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್, ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಮತ್ತು ಎಸ್.ಡಿ.ಪಿ.ಐ.ಪಕ್ಷದ ಅಭ್ಯರ್ಥಿ ರಿಯಾಜ್ ಫರಂಗಿಪೇಟೆ ಅವರ ನಡುವೆ ಸ್ಪರ್ಧೆ ನಡೆದಿತ್ತು.
ಇದರ ಜೊತೆಗೆ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ,ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಇದ್ದ ಕಾರಣ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಬಲದ ಹೋರಾಟ ಕಾಣುತ್ತಿದ್ದು ಇಲ್ಲೂ ಕೂಡ ಕಾಂಗ್ರೆಸ್ ಪರವಾದ ತೀರ್ಪು ಬರುವ ಸಾಧ್ಯತೆಗಳು ಕೂಡ ಇದೆ. ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಶಾತಿಮ್ಮಪ್ಪ ಗೌಡ, ಕಾಂಗ್ರೆಸ್ ನಿಂದ ಅಶೋಕ್ ರೈ ಹಾಗೂ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಇವರ ನಡುವೆ ಸ್ಪರ್ಧೆ ನಡೆದಿತ್ತು.
ಇನ್ನು ಅತ್ಯಂತ ಹೆಚ್ಚು ಸುದ್ದಿ ಮಾಡಿದ್ದ ಬೆಳ್ತಂಗಡಿ ಕ್ಷೇತ್ರದಲ್ಲಿ ಹರೀಶ್ ಪೂಂಜಾ ಅವರು 10 ಸಾವಿರಕ್ಕಿಂತಲೂ ಅಧಿಕ ಅಂತರದಲ್ಲಿ ಗೆಲುವು ಸಾಧಿಸಬಹುದು ಎಂದು ಹೇಳಲಾಗುತ್ತಿದೆ.
ಇಲ್ಲಿ ಹರೀಶ್ ಪೂಂಜಾ ಹಾಗೂ ರಕ್ಷಿತ್ ಶಿವರಾಮ್ ನಡುವೆ ಸ್ಪರ್ಧೆ ನಡೆದಿತ್ತು. ದ.ಕ.ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಬಲಾಬಲ ಇರುವ ಕ್ಷೇತ್ರ ಬಂಟ್ವಾಳ ಕ್ಷೇತ್ರ.
ಇಲ್ಲಿ ಕೂಡ ಸಮಬಲದ ಹೋರಾಟ ಕಂಡುಬರುತ್ತಿದೆಯಾದರೂ ಸಮಾರು ಆರು ಸಾವಿರ ಮತಗಳ ಅಂತರದಿಂದ ಬಿಜೆಪಿಗೆ ಗೆಲುವು ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.
ಇಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮತ್ತು ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಅವರ ನಡುವೆ ನೇರ ಸ್ಪರ್ಧೆ ಉಳಿದ ಪ್ರಾದೇಶಿಕ ಪಕ್ಷಗಳ ಸ್ಪರ್ಧೆ ಇಲ್ಲಿ ಲೆಕ್ಕಕ್ಕಿಲ್ಲ.
ಸುಳ್ಯ ತಾಲೂಕಿನ ಬಿಜೆಪಿ ಅಭ್ಯರ್ಥಿ ಭಗೀರಥಿ ಮುರುಳ್ಯ ಹಾಗೂ ಕೃಷ್ಣಪ್ಪ ಅವರ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಇಲ್ಲಿ ಬಿಜೆಪಿ ಮೇಲುಗೈ ಸಾಧಿಸಲಿದೆ,ಸುಮಾರು 30 ಸಾವಿರಕ್ಕಿಂತಲೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಲಿದೆ ಎನ್ನಲಾಗಿದೆ.
ಮೂಡಬಿದಿರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಹಾಗೂ ಉಮಾನಾಥ ಕೋಟ್ಯಾನ್ ಅವರ ನಡುವೆ ಸ್ಪರ್ಧೆ ನಡೆದಿತ್ತು. ಮೂಡಬಿದಿರೆಯ ಬಿಜೆಪಿ ಅಭ್ಯರ್ಥಿ ಅಲ್ಪ ಅಂತರದಲ್ಲಿ ಗೆಲುವು ಸಾಧಿಸುವ ಸಾಧ್ಯತೆಗಳು ಇವೆ ಎನ್ನಲಾಗಿದೆ.
ಇನ್ನು ಮಂಗಳೂರು ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಆಲಿ, ಬಿಜೆಪಿಯಿಂದ ಭರತ್ ಶೆಟ್ಟಿ ಮತ್ತು ಪಕ್ಷೇತರ ಅಭ್ಯರ್ಥಿ ಯಾಗಿ ಆಹಮ್ಮದ್ ಬಾವ ಅವರು ಸ್ಪರ್ಧೆ ಮಾಡಿದ್ದು ಇಲ್ಲಿ 10 ಸಾವಿರಕ್ಕಿಂತಲೂ ಮೇಲು ಬಿಜೆಪಿ ಅಭ್ಯರ್ಥಿ ಗೆಲ್ಲುವ ಲಕ್ಷಣಗಳು ಇವೆ ಎನ್ನಲಾಗಿದೆ.
ಉಳಿದಂತೆ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ನಡುವೆ ಸ್ಪರ್ಧೆ ನಡೆಸಿದ್ದು ಬಿಜೆಪಿ ಅಭ್ಯರ್ಥಿ ಹತ್ತು ಸಾವಿರಕ್ಕಿಂತಲೂ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸುವ ಬಗ್ಗೆ ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಮೂರು ಕ್ಷೇತ್ರಗಳು ಸಮಬಲದ ಹೋರಾಟ ನಡೆಸಿದರೆ ಉಳಿದ ಐದು ಕ್ಷೇತ್ರಗಳು ಬಿಜೆಪಿ ಪಾಲಾಗುವ ಲಕ್ಷಗಳಿವೆ ಎನ್ನಲಾಗಿದೆ.
ಆದರೆ ಯಾವುದೇ ಸ್ಪಷ್ಟವಾದ ಲೆಕ್ಕಾಚಾರ ಮಾಡಲು ಮೇ.13.ಕ್ಕೆ ಮಾತ್ರ ಸಾಧ್ಯ. ಇದೇನಿದ್ದರೂ ಜನರ ನಾಡಿ ಮಿಡಿತ ಪಕ್ಷದ ಒಂದಷ್ಟು ಲೆಕ್ಕಾಚಾರಗಳು ಅಷ್ಟೇ……