Tuesday, April 16, 2024

ಧರ್ಮಸ್ಥಳದಲ್ಲಿ 51ನೆ ವರ್ಷದ ಉಚಿತ ಸಾಮೂಹಿಕ ವಿವಾಹ : 201 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

ಉಜಿರೆ: ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಬುಧವಾರ ಸಂಜೆ ಗಂಟೆ 6.40 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ನಡೆದ 51ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 201 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.

ಭವ್ಯ ಮೆರವಣಿಗೆಯಲ್ಲಿ ವಧು-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಚಲನಚಿತ್ರ ನಟ ದರ್ಶನ್ ತೂಗುದೀಪ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್ ಮತ್ತು ಗಣ್ಯ ಅತಿಥಿಗಳು ಮಂಗಲಸೂತ್ರವನ್ನು ವಿತರಿಸಿದರು. 6.40 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ವೇದ, ಮಂತ್ರ ಘೋಷ ಪಠಣದೊಂದಿಗೆ ವರನು ವಧುವಿಗೆ ಮಂಗಲಸೂತ್ರಧಾರಣೆ ಮಾಡಿ, ಆಯಾ ಜಾತಿ ಸಂಪ್ರದಾಯದಂತೆ ಮದುವೆಯ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು.

ವಧು-ವರರ ಪ್ರಮಾಣ ವಚನ:

ಧರ್ಮಸ್ಥಳದಲ್ಲಿ ಮಂಗಲ ಮುಹೂರ್ತದಲ್ಲಿ ವಧು-ವರರಾಗಿ ಪವಿತ್ರ ಬಾಂಧವ್ಯ ಹೊಂದಿರುವ ನಾವು ಮುಂದೆ ಜೀವನದಲ್ಲಿ ಧರ್ಮ, ಅರ್ಥ ಮತ್ತು ಕಾಮದಲ್ಲಿ ಸಹಚರರಾಗಿ, ಪರಸ್ಪರ ಪ್ರೀತಿ-ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡದೆ, ಯಾವುದೇ ದುರಭ್ಯಾಸಕ್ಕೂ ತುತ್ತಾಗದೆ ಬದುಕುತ್ತೇವೆ ಎಂಬುದಾಗಿ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ಮತ್ತು ಪೂಜ್ಯ ಹೆಗ್ಗಡೆಯವರ ಸಮಕ್ಷಮದಲ್ಲಿ ಪ್ರಮಾಣವಚನ ಬದ್ಧರಾಗುತ್ತೇವೆ.

ಮದುವೆಯ ವಿವರ:

  • ಅಂತರ್ಜಾತಿ ವಿವಾಹ     -52
  • ಪರಿಶಿಷ್ಟ ಜಾತಿ               – 52
  • ಕುರುಬ                         -9
  • ವೀರಶೈವರು                  -9
  • ಪರಿಶಿಷ್ಟ ವರ್ಗ               -11
  • ಉಳಿದ 68 ಜೊತೆ ಇತರ ಜಾತಿಗೆ ಸೇರಿದವರು.

ಕೇರಳದಿಂದ ಮೂರು ಜೊತೆ ಹಾಗೂ ಆಂಧ್ರಪ್ರದೇಶದ ಒಂದು ಜೊತೆ ಸಾಮೂಹಿಕ ವಿವಾಹದಲ್ಲಿ ಮದುವೆಯಾದರು.

ಮುಖ್ಯಾಂಶಗಳು:

  • 1972 ರಲ್ಲಿ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ ಆರಂಭಿಸಿದ್ದು ಪ್ರತಿವರ್ಷ ನಡೆಸಲಾಗುತ್ತದೆ. ಕಳೆದ ವರ್ಷದವರೆಗೆ 12,576 ಜೊತೆ ವಿವಾಹವಾಗಿದ್ದು ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
  • ಈವರೆಗೆ ಒಂದು ಕೂಡಾ ವಿಚ್ಛೇದನ ಪ್ರಕರಣ ವರದಿಯಾಗಿಲ್ಲ ಎಂಬುದು ಗಮನಾರ್ಹವಾಗಿದೆ.
  • ಧರ್ಮಸ್ಥಳದಲ್ಲಿ ಆರಂಭಿಸಿದ ಸಾಮೂಹಿಕ ವಿವಾಹವನ್ನು ಮಾದರಿ ಎಂದು ಮಾನ್ಯತೆ ನೀಡಿ ಸರ್ಕಾರ, ಇತರ ದೇವಸ್ಥಾನಗಳು, ಮಠ-ಮಂದಿರಗಳು, ರೋಟರಿ ಕ್ಲಬ್‌ನಂತಹ ಸೇವಾಸಂಸ್ಥೆಗಳು ಅನುಸರಿಸುತ್ತಿರುವ ಬಗ್ಯೆ ಡಿ. ವೀರೇಂದ್ರ ಹೆಗ್ಗಡೆಯವರು ಸಂತಸ ವ್ಯಕ್ತಪಡಿಸುತ್ತಾರೆ.
  • ಹಿರಿಯರ ಒಪ್ಪಿಗೆಯೊಂದಿಗೆ ಅಂತರ್‌ಜಾತೀಯ ವಿವಾಹಕ್ಕೂ ಅವಕಾಶ ನೀಡಲಾಗುತ್ತದೆ.
  • ಸಾಮೂಹಿಕ ವಿವಾಹದಲ್ಲಿ ಮದುವೆಯಾದವರಿಗೆ ಇಲಾಖಾ ಅಧಿಕಾರಿಗಳಿಂದ ವಿವಾಹ ನೋಂದಣಿ ಪ್ರಮಾಣ ಪತ್ರ ಕೂಡಾ ಒದಗಿಸಲಾಗುತ್ತದೆ.
  • 12,777ನೆ ಜೋಡಿಯಾದ ಧರ್ಮಸ್ಥಳ ಗ್ರಾಮಾಭಿüವೃದ್ಧಿ ಯೋಜನೆಯ ಸಿಬ್ಬಂದಿಗಳಾದ ಪ್ರಸಾದ್ ಮತ್ತು ಅಶ್ವಿನಿ ದಂಪತಿಗೆ ಉನ್ನತ ಸ್ಥಾನ ನೀಡಿ ವಿಶೇಷ ಗೌರವ ನೀಡಲಾಯಿತು.
  • ನೂತನ ದಂಪತಿಗಳಿಗೆ ಧರ್ಮಸ್ಥಳದ ವತಿಯಿಂದ ವಿಶೇಷ ಉಡುಗೊರೆ ನೀಡಲಾಯಿತು.

ನೂತನ ದಂಪತಿಗಳು ಪರಸ್ಪರ ಹೊಂದಾಣಿಕೆಯೊಂದಿಗೆ ಸಹನೆ, ತಾಳ್ಮೆಯಿಂದ ಸಾರ್ಥಕ ಜೀವನ ನಡೆಸಿ : ಡಿ. ವೀರೇಂದ್ರ ಹೆಗ್ಗಡೆ

ಮದುವೆಯಾಗಿ ಬಂದ ಗೃಹಿಣಿ ಭಾಗ್ಯಲಕ್ಷ್ಮಿಯಾಗಿ ಮನೆಯನ್ನೇ ಬೆಳಗಿ ಸ್ವರ್ಗವನ್ನಾಗಿ ಮಾಡುತ್ತಾಳೆ. ಪತಿ-ಪತ್ನಿ ಪರಸ್ಪರ ಹೊಂದಾಣಿಕೆ, ತಾಳ್ಮೆ ಮತ್ತು ಸಹನೆಯಿಂದ ಸುಖ-ಕಷ್ಟವನ್ನು ಸಮಾನವಾಗಿ ಸ್ವೀಕರಿಸಿ ಅನುಭವಿಸಿ, ಸಾರ್ಥಕ ದಾಂಪತ್ಯ ಜೀವನ ನಡೆಸಬೇಕು. ಆಗ ಮನೆಯೇ ಮಂದಿರವಾಗುತ್ತದೆ. ಸ್ವರ್ಗ ಸುಖವನ್ನು ಅನುಭವಿಸಬಹುದು ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ನೂತನ ದಂಪತಿಗಳಿಗೆ ಕಿವಿಮಾತು ಹೇಳಿ ಶುಭ ಹಾರೈಸಿದರು.

ಸಾಮೂಹಿಕ ವಿವಾಹ ಸರಳವಾಗಿ ಕಡಿಮೆ ವೆಚ್ಚದಲ್ಲಿ ನಡೆಯುತ್ತದೆ. ಆದರೆ ಅಲ್ಪ ಅಲ್ಲ ಎಂದು ಹೆಗ್ಗಡೆಯವರು ಸ್ಪಷ್ಟಪಡಿಸಿದರು.

ಮದುವೆಗಾಗಿ ದುಂದುವೆಚ್ಚ ಮಾಡಬಾರದು. ನಿಶ್ಚಿತಾರ್ಥ, ಮೆಹೆಂದಿ ಮೊದಲಾದ ಕಾರ್ಯಕ್ರಮಗಳಿಗೂ ದುಂದುವೆಚ್ಚ ಮಾಡದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜನರಲ್ಲಿ ಅರಿವು, ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.

ಸಾಮೂಹಿಕ ವಿವಾಹವನ್ನು ವೈಭವೀಕರಿಸುವುದಕ್ಕಾಗಿ ಚಲನಚಿತ್ರ ನಟ ದರ್ಶನ್ ತೂಗುದೀಪ್ ಅವರನ್ನು ಆಹ್ವಾನಿಸಲಾಗಿದೆ. ತಾನು ಕೂಡಾ ಅವರ ಅಭಿಮಾನಿಯಾಗಿದ್ದು ಅವರ ಮಾನವೀಯತೆ ಸೇವಾ ಕಳಕಳಿ, ಪರಿಸರ ಪ್ರೇಮ, ಪ್ರಾಣಿ-ಪಕ್ಷಿಗಳ ಬಗ್ಗೆ ಒಲವು ಮತ್ತು ಬದ್ಧತೆಯನ್ನು ಶ್ಲಾಘಿಸಿ ಅಭಿನಂದಿಸಿದರು.

ಶುಭಾಶಂಸನೆ ಮಾಡಿ ಮಾತನಾಡಿದ ಚಲನಚಿತ್ರ ನಟ ದರ್ಶನ್ ತೂಗುದೀಪ್ ತಾನು ಕೂಡಾ ಧರ್ಮಸ್ಥಳದಲ್ಲೇ ಮದುವೆಯಾಗಿರುವುದನ್ನು ಸ್ಮರಿಸಿದರು. ಪೂಜ್ಯ ಹೆಗ್ಗಡೆಯವರ ಆಶೀರ್ವಾದದಿಂದ ತಾನು ಉನ್ನತ ಸಾಧನೆ ಮಾಡಲು ಸಾಧ್ಯವಾಯಿತು ಎಂದರು. ನೂತನ ದಂಪತಿಗಳು ಪರಸ್ಪರ ಅರಿತುಕೊಂಡು, ಗೌರವಿಸಿ, ಪ್ರೀತಿ ವಿಶ್ವಾಸದಿಂದ ಸಾರ್ಥಕ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಹೇಮಾವತಿ ವಿ. ಹೆಗ್ಗಡೆ, ಶ್ರದ್ಧಾ ಅಮಿತ್, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್. ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರುತಾಜಿತೇಶ್ ಮತ್ತು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು.

ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಧನ್ಯವಾದವಿತ್ತರು. ದಿವ್ಯ ಕುಮಾರಿ ಕಾರ್ಯಕ್ರಮ ನಿರ್ವಹಿಸಿದರು.

More from the blog

ಏ.19 -28: ಇತಿಹಾಸ ಪ್ರಸಿದ್ಧ ಕಟ್ಟತ್ತಿಲ ಉರೂಸ್

ವಿಟ್ಲ: ಸಾಲೆತ್ತೂರು ಗ್ರಾಮದ ಕಟ್ಟತ್ತಿಲದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಇತಿಹಾಸ ಪ್ರಸಿದ್ಧ ಅಸ್ಸಯ್ಯಿದ್ ವಲಿಯುಲ್ಲಾಹಿ (ಖ.ಸಿ) ಅವರ ಹೆಸರಿನಲ್ಲಿ 2 ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮ ಮತ್ತು ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮ...

ಲೋಕಸಭಾ ಚುನಾವಣೆ : ದಕ್ಷಿಣ ಕನ್ನಡ ಕ್ಷೇತ್ರದ ಸಂಯೋಜಕರನ್ನಾಗಿ ಅಬ್ದುಲ್ ರೆಹಮಾನ್ ಪಡ್ಪು ನೇಮಕ

ಲೋಕಸಭಾ ಚುನಾವಣೆಯ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಸಂಯೋಜಕರನ್ನಾಗಿ ಅಬ್ದುಲ್ ರೆಹಮಾನ್ ಪಡ್ಪು ಅವರನ್ನು ನೇಮಕ ಮಾಡಲಾಗಿದೆ.    

ವಿಟ್ಲ ಪೇಟೆಯಲ್ಲಿ ಕಾಂಗ್ರೆಸ್ ರೋಡ್ ಶೋ: ಸುಡುಬಿಸಿಲಿಗೂ ಜಗ್ಗದ ಉತ್ಸಾಹ

ವಿಟ್ಲ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳವಾರ ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ, ಪ್ರಚಾರ ಕಾರ್ಯ ನಡೆಸಿದರು. ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ...

ದ.ಕ ಜಿಲ್ಲೆಯ 42 ಮಂದಿ ಜೆಡಿಎಸ್ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿ ದ.ಕ ಜಿಲ್ಲೆಯ 42 ಮಂದಿ ಜೆಡಿಎಸ್ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್...